ಕೊರೋನ ಸೋಂಕಿತ ಬಾಲಕ ಸೇರಿ ನಾಲ್ವರಿಗೆ ಎಸೆಸೆಲ್ಸಿ ಪರೀಕ್ಷೆಗೆ ಅನುಮತಿ ನಿರಾಕರಣೆ

ಸಾಂದರ್ಭಿಕ ಚಿತ್ರ
ಬೆಳಗಾವಿ, ಜೂ.24: ಬೆಳಗಾವಿ ಜಿಲ್ಲೆಯ ಓರ್ವ ವಿದ್ಯಾರ್ಥಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತನೂ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳಿಗೆ ಜೂ.25ರಿಂದ ನಡೆಯುವ ಎಸೆಸೆಲ್ಸಿ ಪರೀಕ್ಷೆ ಬರೆಯಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ಚೈನ್ನೈನಿಂದ ವಾಪಸ್ ಆಗಿದ್ದ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ 16 ವರ್ಷದ ಬಾಲಕನಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ಲಾಕ್ಡೌನ್ ಜಾರಿ ಮೊದಲೇ ಈತ ಚೆನ್ನೈನಲ್ಲಿರುವ ಅಕ್ಕನ ಮನೆಗೆ ಹೋಗಿದ್ದನು. ಮರಳಿ ಕಿತ್ತೂರಿಗೆ ಬಂದಿದ್ದ ಬಾಲಕನನ್ನು 14 ದಿನ ಕ್ವಾರಂಟೈನ್ ಮಾಡಲಾಗಿತ್ತು.
ಕ್ವಾರಂಟೈನ್ ಅವಧಿ ಮುಗಿದ ಬಳಿಕ ಗ್ರಾಮದಲ್ಲಿ ಸುತ್ತಾಡಿ, ಕೂದಲು ಕಟ್ಟಿಂಗ್ ಕೂಡ ಮಾಡಿಸಿಕೊಂಡಿದ್ದ. ಅಲ್ಲದೆ, ಸ್ನೇಹಿತರ ಜೊತೆಗೆ ಶಾಲೆಗೆ ಹೋಗಿ ಹಾಲ್ ಟಿಕೆಟ್ ಕೂಡ ತಂದಿದ್ದನು.
ಬಳಿಕ ಬಾಲಕನಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ಇದೀಗ ಬಾಲಕ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಾಲಕನ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮೂವರು ಬಾಲಕರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಈ ನಾಲ್ವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.







