ಚಿಕ್ಕಮಗಳೂರು: ಇಂಜಿನಿಯರ್ ಗೆ ಕೊರೋನ ಸೋಂಕು; ವೈದ್ಯರು ಸೇರಿ 40 ಆರೋಗ್ಯ ಸಿಬ್ಬಂದಿಗೆ ಕ್ವಾರಂಟೈನ್

ಚಿಕ್ಕಮಗಳೂರು, ಜೂ.24: ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳ ಏರಿಕೆ ಮುಂದುವರಿದಿದ್ದು, ಬೆಂಗಳೂರಿನಿಂದ ನಗರಕ್ಕೆ ಇತ್ತೀಚೆಗೆ ಆಗಮಿಸಿದ್ದ 40 ವರ್ಷದ ವ್ಯಕ್ತಿಯೊಬ್ಬರಲ್ಲಿ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ನಗರದಲ್ಲಿ ಈ ಸೋಂಕಿತ ವ್ಯಕ್ತಿಯ ಆರೋಗ್ಯ ತಪಾಸಣೆ ಮಾಡಿದ್ದ ಸರಕಾರಿ, ಖಾಸಗಿ ವೈದ್ಯರೂ ಸೇರಿದಂತೆ 40 ಮಂದಿ ಆರೋಗ್ಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ನಗರದ ಕುವೆಂಪುನಗರ ಬಡಾವಣೆಯಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಬೆಂಗಳೂರಿನಿಂದ ಇತ್ತೀಚೆಗೆ ಆಗಮಿಸಿದ್ದ ಇಂಜಿನಿಯರ್ ಓರ್ವರಲ್ಲಿ ಸೋಂಕು ಇರುವುದು ಬುಧವಾರ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ. ಈ ವ್ಯಕ್ತಿಗೆ ಬೆಂಗಳೂರಿನಿಂದ ಬಂದ ಬಳಿಕ ಜ್ವರ ಕಾಣಿಸಿಕೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯ ವೈದ್ಯರ ಬಳಿ ತಪಾಸಣೆ ಮಾಡಿಸಿದ್ದಾರೆ. ನಂತರ ನಗರದ ಜಿಲ್ಲಾಸ್ಪತ್ರೆಯಲ್ಲೂ ತಪಾಸಣೆ ಮಾಡಿಸಿರುವುದು ಬೆಳಕಿಗೆ ಬಂದಿದೆ. ಪರಿಣಾಮ ಖಾಸಗಿ ಓರ್ವ ವೈದ್ಯರು ಹಾಗೂ ಇಬ್ಬರು ಸರಕಾರಿ ವೈದ್ಯರೂ ಸೇರಿದಂತೆ ಸುಮಾರು 40 ಮಂದಿ ಆರೋಗ್ಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಈ ಸೋಂಕಿತ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ತರ್ತು ಚಿಕಿತ್ಸಾ ಘಟಕದ ಸಿಬ್ಬಂದಿಯೂ ಆತಂಕದಲ್ಲಿದ್ದಾರೆ. ಕುವೆಂಪು ನಗರದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿರುವುದರಿಂದ ಸಂಬಂಧಿಗಳ ಮನೆಯವರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಸೋಂಕು ಪತ್ತೆಗೆ ಕ್ರಮವಹಿಸಲಾಗಿದೆ. ಸೋಂಕಿತ ವ್ಯಕ್ತಿ ಭೇಟಿ ನೀಡಿದ್ದ ಕುವೆಂಪು ನಗರ ಬಡಾವಣೆಯನ್ನು ಸೀಲ್ ಮಾಡದಿರಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಬುಧವಾರ ಪತ್ತೆಯಾದ ಒಂದು ಕೊರೋನ ಪಾಸಿಟಿವ್ ಪ್ರಕರಣದಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 23ಕ್ಕೇರಿತ್ತು. ಆದರೆ ಸೋಂಕಿತ ಪೈಕಿ ಗುಣಮುಖರಾದ 4 ಮಂದಿಯನ್ನು ಜಿಲ್ಲಾಡಳಿತ ಬುಧವಾರ ಬಿಡುಗಡೆ ಮಾಡಿರುವದರಿಂದ ಸೋಂಕಿತರ ಸಂಖ್ಯೆ 19ಕ್ಕಿಳಿದಿದೆ.







