ಪಶ್ಚಿಮದಂಡೆ ಸ್ವಾಧೀನಪಡಿಸುವ ಇಸ್ರೇಲ್ ಯೋಜನೆಗೆ ಪ್ರತಿಭಟನೆ: ಯುರೋಪ್ ಒಕ್ಕೂಟದಿಂದ ಸಾವಿರಕ್ಕೂ ಅಧಿಕ ಸಂಸದರಿಂದ ಸಹಿ
ಜೆರುಸಲೇಂ,ಜೂ.24: ತಾನು ಅತಿಕ್ರಮಿಸಿಕೊಂಡಿರುವ ಪಶ್ಚಿಮದಂಡೆಯ ಭಾಗಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಇಸ್ರೇಲ್‌ನ ಯೋಜನೆಯನ್ನು ಪ್ರತಿಭಟಿಸಿ ಯುರೋಪ್ ಒಕ್ಕೂಟದ ಸಾವಿರಕ್ಕೂ ಅಧಿಕ ಸಂಸದರು ಜಂಟಿ ಪತ್ರವೊಂದಕ್ಕೆ ಸಹಿಹಾಕಿದ್ದಾರೆ. ಪಶ್ಚಿಮದಂಡೆಯ ಭಾಗಗಳನ್ನು ಸ್ವಾಧೀನಪಡಿಸುವ ನಡೆಯು, ಇಸ್ರೇಲ್-ಫೆಲೆಸ್ತೀನ್ ಸಂಘಷವನ್ನು ಶಾಂತಿಯುತವಾಗಿ ಬಗೆಹರಿಸುವ ಕುರಿತ ಆಶಾವಾದವನ್ನು ಭಗ್ನಗೊಳಿಸಲಿದೆ ಎಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಯುರೋಪ್ ಒಕ್ಕೂಟದ ಸರಕಾರಗಳನ್ನು ಉದ್ದೇಶಿಸಿ ಬರೆಯಲಾದ ಈ ಪತ್ರವನ್ನು ಮಂಗಳವಾರ ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದೆ. ಇಸ್ರೇಲ್ ಅಕ್ರಮವಾಗಿ ಸ್ಥಾಪಿಸಿರುವ ವಸಾಹತುಗಳನ್ನು ಒಳಗೊಂಡ ಪಶ್ಚಿಮದಂಡೆಯ ಕೆಲವು ಭಾಗಗಳನ್ನು ಸ್ವಾಧೀನಪಡಿಸುವ ಪ್ರಕ್ರಿಯೆಯನ್ನು ಜುಲೈ1ರ ವೇಳೆಗೆ ಆರಂಭಿಸುವುದಾಗಿ ಇಸ್ರೇಲ್ ಪ್ರಧಾನಿ ನೆತಾನ್ಯಾಹು ಅವರ ಘೋಷಣೆ ಹಾಗೂ ಟ್ರಂಪ್ ಆಡಳಿತ ಮಧ್ಯಪ್ರಾಚ್ಯ ಯೋಜನೆ ವಿರುದ್ಧ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಯುರೋಪ್ ಒಕ್ಕೂಟದ 25 ರಾಷ್ಟ್ರಗಳ 1080 ಸಂಸದರು ಪತ್ರಕ್ಕೆ ಸಹಿಹಾಕಿದ್ದು. ಪಶ್ಚಿಮದಂಡೆಯ ಭಾಗಗಳನ್ನು ಸ್ವಾಧೀನ ಪಡಿಸುವ ಇಸ್ರೇಲ್‌ನ ಯೋಜನೆಯನ್ನು ತಡೆಯಲು ನಿರ್ಣಾಯಕ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಎರಡು ರಾಷ್ಟ್ರ ಸಿದ್ದಾಂತದಡಿ ಬಿಕ್ಕಟ್ಟನ್ನು ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.





