ಮಂಗಳೂರು : ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಬಂದೋಬಸ್ತ್
ಮಂಗಳೂರು : ಕೊರೋನ ಭೀತಿ ನಡುವೆ ಇಂದಿನಿಂದ ಎಸೆಸೆಲ್ಸಿ ಪರೀಕ್ಷೆ ಆರಂಭಗೊಂಡಿದೆ. ದ.ಕ. ಜಿಲ್ಲೆಯ 95 ಪರೀಕ್ಷಾ ಕೇಂದ್ರ ಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಹೆಚ್ಚುವರಿಯಾಗಿ 19 ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಕೇಂದ್ರ ಗಳ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲೇ ಪರೀಕ್ಷಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಗೊಳಪಡಿಸಿ ಕೈಗಳಿಗೆ ಸ್ಯಾನಿಟೈಸರ್ ನೀಡಿ ವಿದ್ಯಾರ್ಥಿಗಳನ್ನು ಒಳ ಕಳುಹಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಸಿಬ್ಬಂದಿ ವಿದ್ಯಾರ್ಥಿಗಳ ಸುರಕ್ಷಿತ ಅಂತರ, ಮಾಸ್ಕ್ ಧಾರಣೆ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ.
ಪರೀಕ್ಷೆ 10.30ಕ್ಕೆ ಆರಂಭಗೊಳ್ಳಲಿದ್ದು, ಕೊರೋನ ಭೀತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾದ ಹಿನ್ನೆಲೆಯಲ್ಲಿ ಕೇಂದ್ರಗಳಿಗೆ ಪರೀಕ್ಷೆ ಆರಂಭಕ್ಕೆ ಕನಿಷ್ಠ ಒಂದೂವರೆ ಗಂಟೆ ಮುಂಚಿತವಾಗಿ ಆಗಮಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಮಕ್ಕಳನ್ನು ಕರೆದು ತರುವ ಪೋಷಕರು ಕೇಂದ್ರದ ಹೊರಗೆ ಅಥವಾ ಸುತ್ತಮುತ್ತ ನಿಲ್ಲದಂತೆ ಗಸ್ತಿನಲ್ಲಿರುವ ಪೊಲೀಸರು ಸೂಚನೆ ನೀಡಿ ತಕ್ಷಣ ಹೊರಡುವಂತೆ ಸೂಚಿಸುತ್ತಿದ್ದಾರೆ.
ಪೋಷಕರು ಆತಂಕದ ಜತೆಯಲ್ಲೇ ಮಕ್ಕಳನ್ನು ಪರೀಕ್ಷಾ ಕೇಂದ್ರಗಳ ಒರಗೆ ಬಿಟ್ಟು ತೆರಳುತ್ತಿದ್ದಾರೆ. ನಗರದಲ್ಲಿನ ಕೇಂದ್ರಗಳಿಗೆ ನಗರದ ಹೊರವಲಯದ ಶಾಲಾ ವಿದ್ಯಾರ್ಥಿಗಳನ್ನು ಶಾಲಾ ಬಸ್ಸುಗಳ ಮೂಲಕವೇ ಕರೆತರುವ ವ್ಯವಸ್ಥೆ ಮಾಡಲಾಗಿದೆ.
ನಗರದ ಕೆಲ ಪರೀಕ್ಷಾ ಕೇಂದ್ರಗಳಲ್ಲಿ ಅತ್ಯಂತ ಅಚ್ಚುಕಟ್ಟಾದ ವ್ಯವಸ್ಥೆ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗುತ್ತಿದೆ. ಪ್ರವೇಶ ದ್ವಾರದ ಸಿಬ್ಬಂದಿ ಮಾಸ್ಕ್ ಧರಿಸಿಯೂ ನಗುಮೊಗದೊಂದಿಗೆ ವಿದ್ಯಾರ್ಥಿಯನ್ನು ಸ್ವಾಗತಿಸಿ 'ಆಲ್ ದಿ ಬೆಸ್ಟ್' ಎಂದು ಹಾರೈಸುತ್ತಿರುವುದು ಕಂಡು ಬಂತು.