ಇನ್ನು ಮುಂದೆ ಫೇರ್ & ಲವ್ಲಿಯಲ್ಲಿ ‘ಫೇರ್’ ಇಲ್ಲ!
![ಇನ್ನು ಮುಂದೆ ಫೇರ್ & ಲವ್ಲಿಯಲ್ಲಿ ‘ಫೇರ್’ ಇಲ್ಲ! ಇನ್ನು ಮುಂದೆ ಫೇರ್ & ಲವ್ಲಿಯಲ್ಲಿ ‘ಫೇರ್’ ಇಲ್ಲ!](https://www.varthabharati.in/sites/default/files/images/articles/2020/06/25/248652-1593083250.jpg)
ಮುಂಬೈ: ತನ್ನ ಜನಪ್ರಿಯ ಫೇರ್ ನೆಸ್ ಕ್ರೀಮ್ ‘ಫೇರ್ & ಲವ್ಲಿ'ಯಿಂದ 'ಫೇರ್' ಪದವನ್ನು ಕೈಬಿಡುವುದಾಗಿ ಹಾಗೂ ಉತ್ಪನ್ನಕ್ಕೆ ಹೊಸ ಹೆಸರು ನೀಡುವುದಾಗಿ ಹಿಂದುಸ್ತಾನ್ ಯುನಿಲಿವರ್ ಹೇಳಿದೆ.
ಈ ಕ್ರೀಮ್ ಗೆ ಹೊಸ ಹೆಸರು ಆಯ್ಕೆ ಮಾಡಲಾಗಿದ್ದು, ಅದಕ್ಕೆ ಸೂಕ್ತ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಕಂಪೆನಿ ಬಿಡುಗಡೆಗೊಳಿಸಿರುವ ಹೇಳಿಕೆ ತಿಳಿಸಿದೆ.
“ಸೌಂದರ್ಯವನ್ನು ಹೆಚ್ಚು ವೈವಿಧ್ಯಮಯವಾಗಿ ಬಿಂಬಿಸುವ ನಿಟ್ಟಿನಲ್ಲಿ ನಾವು ಮುಂದಡಿಯಿಡಬೇಕೆಂದಿದ್ದೇವೆ'' ಎಂದು ಹಿಂದುಸ್ತಾನ್ ಯುನಿಲಿವರ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸಂಜಯ್ ಮೆಹ್ತಾ ಹೇಳಿದ್ದಾರೆ.
“2019ರಲ್ಲಿ ನಾವು ನಮ್ಮ ಉತ್ಪನ್ನದ ಪ್ಯಾಕೇಜಿಂಗ್ ನಿಂದ ಎರಡು ಮುಖಗಳ ಚಿತ್ರ ಹಾಗೂ ಶೇಡ್ ಗೈಡ್ ತೆಗೆದು ಹಾಕಿದ್ದೇವೆ ಹಾಗೂ ಉತ್ಪನ್ನದ ಕುರಿತು ಮಾತನಾಡುವಾಗ ಗೌರವರ್ಣದ ಬದಲು ಹೊಳಪು ಕುರಿತಂತೆ ಮಾತನಾಡಿದ್ದೇವೆ, ಈ ಬದಲಾವಣೆಗಳನ್ನು ಗ್ರಾಹಕರು ಉತ್ತಮವಾಗಿ ಸ್ವೀಕರಿಸಿದ್ದಾರೆ” ಎಂದು ಅವರು ಹೇಳಿದರು.
ತನ್ನ ಕೆಲ ಗೌರವರ್ಣ ಕ್ರೀಮ್ ಗಳ ಮಾರಾಟವನ್ನು ನಿಲ್ಲಿಸುವುದಾಗಿ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ಹೇಳಿದ ಬೆನ್ನಲ್ಲೇ ಹಿಂದುಸ್ತಾನ್ ಯುನಿಲಿವರ್ ಹೇಳಿಕೆ ಬಂದಿದೆ. ಸಂಸ್ಥೆಯ ಉತ್ಪನ್ನಗಳಾದ ನ್ಯೂಟ್ರೋಜೆನಾ ಫೈನ್ ಫೇರ್ ನೆಸ್, ಕ್ಲಿಯರ್ ಫೇರ್ ನೆಸ್ ಹಾಗೂ ಕ್ಲೀನ್ ಆ್ಯಂಡ್ ಕ್ಲಿಯರ್ ಇವುಗಳನ್ನು ಭಾರತ ಮತ್ತು ಪಶ್ಚಿಮ ಏಷ್ಯಾದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.