‘ಯಾರೂ ಗಡಿ ಪ್ರವೇಶಿಸಿಲ್ಲ’ ಎಂಬ ಮೋದಿ ಹೇಳಿಕೆಗೆ ಪಿಎಂಒ ಚಾನೆಲ್ ಕತ್ತರಿ
ಹೊಸದಿಲ್ಲಿ,ಜೂ.28: ಗಲ್ವಾನ್‌ನಲ್ಲಿ ಭಾರತ-ಚೀನಿ ಸೈನಿಕರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ ಇತ್ತೀಚೆಗೆ ನಡೆದ ಸರ್ವಪಕ್ಷ ಸಭೆಯಲ್ಲಿ, ‘‘ ಭಾರತದ ಭೂಪ್ರದೇಶದೊಳಗೆ ಯಾರೂ ಅತಿಕ್ರಮ ನಡೆಸಿಲ್ಲ’’ ಎಂಬ ಪ್ರಧಾನಿಯ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಅವರ ಭಾಷಣದ ಅಧಿಕೃತ ವಿಡಿಯೋವನ್ನು ಪ್ರಧಾನಿ ಕಾರ್ಯಾಲಯ ಸೆನ್ಸಾರ್ ಮಾಡಿದೆ ಎಂದು Thewire.in ವರದಿ ಮಾಡಿದೆ.
ಜೂನ್ 19ರಂದು ನಡೆದ ಸರ್ವಪಕ್ಷ ಸಭೆಯ ಸಮಾರೋಪ ಭಾಷಣದಲ್ಲಿ ಮೋದಿಯವರು, ‘‘ ನ ಕೋಯಿ ವಹೀ ಹಮಾರೆ ಸೀಮಾ ಮೇ ಗುಸ್ ಆಯಾ ಹೈ, ನಾ ಹಿ ಕೊಯಿ ಗುಸಾ ಹುವಾ ಹೈ, ನಾ ಹಿ ಹಮಾರಿ ಪೋಸ್ಟ್ ಕಿಸಿ ದೂಸ್ರೆ ಕೆ ಕಬ್ಜೆ ಮೆ ಹೈ ( ಯಾರೂ ಕೂಡಾ ನಮ್ಮ ಗಡಿಯೊಳಗೆ ಬಂದಿಲ್ಲ ಅಥವಾ ಯಾರೂ ಕೂಡಾ ನುಸುಳಿಲ್ಲ ಅಥವಾ ಯಾರೂ ಕೂಡಾ ನಮ್ಮ ಗಡಿಠಾಣೆಯನ್ನು ವಶಪಡಿಸಿಕೊಂಡಿಲ್ಲ) ಎಂದು ಹೇಳಿದ್ದರು. ಪ್ರಧಾನಿಯ ಈ ಹೇಳಿಕೆಯನ್ನು ಸುದ್ದಿವಾಹಿನಿಗಳು ನೇರಪ್ರಸಾರ ಮಾಡಿದ್ದವು. ಪ್ರಧಾನಿಯವರಿಗೆ ಸಂಬಂಧಿಸಿ ಎರಡು ಅಧಿಕತ ಯೂಟ್ಯೂಬ್ ಚಾನೆಲ್‌ಗಳಲ್ಲಿಯೂ ಈ ಭಾಷಣದ ನೇರಪ್ರಸಾರವಾಗಿತ್ತು. ಆದಾಗ್ಯೂ ಅವುಗಳಲ್ಲೊಂದಾದ ಪ್ರಧಾನಿ ಕಾರ್ಯಾಲಯದ ಯೂಟ್ಯೂಬ್ ಚಾನೆಲ್‌ನಲ್ಲಿರುವ ವಿಡಿಯೋದಲ್ಲಿ ಪ್ರಧಾನಿ ವಿವಾದಾತ್ಮಕ ಭಾಷಣದ ಸಾಲುಗಳಿಗೆ ಕತ್ತರಿ ಹಾಕಲಾಗಿದೆ.