ಕೊರೋನ ರೋಗಿಗಳ ಆರೈಕೆಗಾಗಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿ ತನ್ನ ಸಭಾಂಗಣವನ್ನು ಬಿಟ್ಟು ಕೊಟ್ಟ ಮಸೀದಿ
ಭಿವಂಡಿ: ಕೋವಿಡ್-19 ಸೋಂಕು ವ್ಯಾಪಕವಾಗಿರುವ ಈಗಿನ ಸಮಯದಲ್ಲಿ ಮಾನವೀಯ ನೆಲೆಯಲ್ಲಿ ಭಿವಂಡಿಯ ಮಸೀದಿಯೊಂದು ತನ್ನ ಸಭಾಂಗಣವನ್ನು ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರವಾಗಿ ಪರಿವರ್ತಿಸಿ ರೋಗಿಗಳಿಗೆ ಆಮ್ಲಜನಕ ಪೂರೈಕೆಗೆ ಅನುವಾಗುವಂತಹ ಹಾಸಿಗೆಗಳನ್ನು ಒದಗಿಸಿದೆ.
ಆಸ್ಪತ್ರೆಗಳಲ್ಲಿ ದಾಖಲಾಗಲು ಸಾಧ್ಯವಿಲ್ಲದ ಹಾಗೂ ಉಸಿರಾಟದ ಸಮಸ್ಯೆಯಿರುವ ರೋಗಿಗಳಿಗೆ ಅನುಕೂಲಕರವಾಗುವಂತೆ ಈ ಕೋವಿಡ್ ಕೇರ್ ಕೇಂದ್ರ ಕಾರ್ಯಾಚರಿಸುತ್ತಿದೆ.
ಭಿವಂಡಿ-ನಿಝಾಂಪುರ ಪ್ರದೇಶದಲ್ಲಿ ಇಲ್ಲಿಯ ತನಕ 1,496 ಕೋವಿಡ್ ಪ್ರಕರಣಗಳು ವರದಿಯಾಗಿ 91 ಮಂದಿ ಬಲಿಯಾಗಿದ್ದಾರೆ. ಅಲ್ಲಿನ ಆರೋಗ್ಯ ವ್ಯವಸ್ಥೆಯ ಮೇಲೆ ಇನ್ನಷ್ಟು ಒತ್ತಡ ಉಂಟಾಗದಿರಲಿ ಎಂದು ಸ್ಥಳೀಯ ಜಮಾಅತೆ ಇಸ್ಲಾಮೀ ಹಿಂದ್, ಮೂವ್ ಮೆಂಟ್ ಫಾರ್ ಪೀಸ್ ಆ್ಯಂಡ್ ಜಸ್ಟಿಸ್ ಹಾಗೂ ಶಾಂತಿ ಸಾಗರ್ ಟ್ರಸ್ಟ್ ಜತೆಯಾಗಿ ಮಕ್ಕಾ ಮಸೀದಿ ಸಭಾಂಗಣದಲ್ಲಿ ಜೂನ್ 18ರಂದು ಕೋವಿಡ್ ಕೇರ್ ಕೇಂದ್ರ ಆರಂಭಿಸಿವೆ.
ಕಳೆದ ಎಂಟು ದಿನಗಳಲ್ಲಿ 108ಕ್ಕೂ ಅಧಿಕ ರೋಗಿಗಳು ಈ ಸೌಲಭ್ಯದ ಪ್ರಯೋಜನ ಪಡೆದಿದ್ದು, ನಂತರ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಯಿತು. ಎಂಟು ರೋಗಿಗಳ ಮನೆಗೆ 15 ಆಮ್ಲಜನಕ ಸಿಲಿಂಡರ್ ಗಳನ್ನು ಒದಗಿಸುವ ಕಾರ್ಯವನ್ನೂ ಉಚಿತವಾಗಿ ಸ್ವಯಂಸೇವಕರು ನಡೆಸಿದ್ದಾರೆ.
ಇಲ್ಲಿ ಇನ್ನೂ ಐದು ಹಾಸಿಗಗೆಳನ್ನು ಹಾಗೂ 10 ಸಿಲಿಂಡರ್ ಗಳನ್ನು ಒದಗಿಸುವ ಉದ್ದೇಶವಿದೆ. ಈ ಕೇಂದ್ರಕ್ಕೆ ಪ್ರತಿ ದಿನ ಇಬ್ಬರು ವೈದ್ಯರು ಬಂದುರೋಗಿಗಳ ಆರೋಗ್ಯ ತಪಾಸಣೆ ನಡೆಸಿದರೆ ಆರು ಮಂದಿ ಸಿಬ್ಬಂದಿ ರೋಗಿಗಳ ಆರೋಗ್ಯದ ಮೇಲೆ ನಿಗಾ ಇಡುತ್ತಾರೆ.