ಕೊರೋನ ವಿರುದ್ಧದ ಹೋರಾಟ: ‘ದೇಶದ ಹಿತಾಸಕ್ತಿಗಾಗಿ’ ಮೂರನೇ ಬಾರಿ ವಿವಾಹವನ್ನು ಮುಂದೂಡಿದ ಪ್ರಧಾನಿ

Photo: facebook.com/mettefrederiksen.dk
ಕೋಪೆನ್ ಹ್ಯಾಗನ್: ಕೋವಿಡ್-19ನಿಂದಾಗಿ ತಮ್ಮ ವಿವಾಹವನ್ನು ಈಗಾಗಲೇ ಎರಡು ಬಾರಿ ಮುಂದೂಡಿರುವ ಡೆನ್ಮಾರ್ಕ್ ದೇಶದ ಪ್ರಧಾನಿ ಮೆಟೆ ಫ್ರೆಡೆರಿಕ್ಸನ್ ಇದೀಗ ಮೂರನೇ ಬಾರಿಯೂ ತಮ್ಮ ವಿವಾಹವನ್ನು ಮುಂದೂಡಿದ್ದಾರೆ.
ಈ ಬಾರಿ ಯುರೋಪಿಯನ್ ಯೂನಿಯನ್ ಶೃಂಗಸಭೆ ಅವರ ಮದುವೆ ನಿಗದಿಯಾಗಿರುವ ದಿನಾಂಕದಂದೇ ನಡೆಯಲಿರುವುದರಿಂದ ವಿವಾಹವನ್ನು ಮುಂದೂಡಿದ್ದಾರೆ.
“ಈ ಅದ್ಭುತ ವ್ಯಕ್ತಿಯನ್ನು ಮದುವೆಯಾಗಲು ನಾನು ಹಾತೊರೆಯುತ್ತಿದ್ದೇನೆ. ಆದರೆ ವಾಸ್ತವವಾಗಿ ಅದು ಅಷ್ಟು ಸುಲಭವಲ್ಲ, ನಾವು ವಿವಾಹವಾಗಲು ನಿರ್ಧರಿಸಿದ ದಿನಾಂಕವಾದ ಜುಲೈ ತಿಂಗಳ ಶನಿವಾರದಂದೇ ಬ್ರಸ್ಸೆಲ್ಸ್ ನಲ್ಲಿ ಬಹುಮುಖ್ಯವಾದ ಸಭೆಯೊಂದಿದೆ. ನನಗೆ ನನ್ನ ಕರ್ತವ್ಯ ಹಾಗೂ ಡೆನ್ಮಾರ್ಕ್ ಹಿತಾಸಕ್ತಿಯನ್ನು ರಕ್ಷಿಸಬೇಕಿದೆ. ಅದಕ್ಕಾಗಿ ನಾವು ನಮ್ಮ ವಿವಾಹವನ್ನು ಮತ್ತೊಮ್ಮೆ ಮುಂದೂಡಬೇಕಾಗಿ ಬಂದಿದೆ. ನಾವು ಸದ್ಯದಲ್ಲಿಯೇ ವಿವಾಹವಾಗಬಹುದು ಹಾಗೂ ಬೋ ಅವರಿಗೆ `ಯೆಸ್' ಹೇಳಲು ಕಾದಿದ್ದೇನೆ (ಅದೃಷ್ಟವಶಾತ್ ಅವರು ತುಂಬಾ ತಾಳ್ಮೆಯಿಂದಿದ್ದಾರೆ)'' ಎಂದು ತಾನು ಮದುವೆಯಾಗಲಿರುವ ಬೋ ಜತೆಗಿರುವ ಫೋಟೋ ಪೋಸ್ಟ್ ಮಾಡಿ ಡೆನ್ಮಾರ್ಕ್ ಪ್ರಧಾನಿ ಬರೆದಿದ್ದಾರೆ.
ಕೊರೋನವೈರಸ್ ಲಾಕ್ಡೌನ್ ಹೇರಲ್ಪಟ್ಟ ನಂತರ ಮೊದಲ ಬಾರಿಗೆ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳ 27 ಮುಖ್ಯಸ್ಥರು ಮುಖಾಮುಖಿ ಜುಲೈ 17-18ರಂದು ಭೇಟಿಯಾಗುವ ನಿರ್ಧಾರವನ್ನು ಕಳೆದ ವಾರ ನಡೆದ ವರ್ಚುವಲ್ ಸಭೆಯಲ್ಲಿ ಕೈಗೊಳ್ಳಲಾಗಿತ್ತು.





