ಸರಕಾರದ ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ಜುಲೈ 3ರಂದು ದೇಶಾದ್ಯಂತ ಧರಣಿ
ಮಂಗಳೂರು, ಜೂ.26: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಧೋರಣೆಗಳನ್ನು ಖಂಡಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜುಲೈ 3ರಂದು ದೇಶಾದ್ಯಂತ ಎಲ್ಲ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (ಜೆಸಿಟಿಯು)ನಿರ್ಧರಿಸಿದೆ.
ಕೊರೋನ ಮಹಾಮಾರಿಯಿಂದ ಜನ ಜೀವನ ಅಸ್ತವ್ಯಸ್ತವಾಗಿರುವ ಸಂದರ್ಭದಲ್ಲಿ ಸರಕಾರ ತನ್ನ ಗುಪ್ತ ಕಾರ್ಯಸಾಧನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ನೂರಾರು ವರ್ಷಗಳ ಹೋರಾಟದ ಫಲವಾಗಿ ಜಾರಿಗೆ ಬಂದ ಕಾರ್ಮಿಕ ಕಾನೂನುಗಳನ್ನು ನಿಷ್ಕ್ರಿಯಗೊಳಿಸಲು ಸರ್ಕಾರ ಈ ಸಂದರ್ಭವನ್ನು ಉಪಯೋಗಿಸುತ್ತಿದೆ. ಲಾಕ್‌ಡೌನ್‌ನಿಂದ ಹಲವು ಕಾರ್ಮಿಕರು ಸಂಬಳವಿಲ್ಲದೆ ಉಪವಾಸ ಬೀಳುವ ಪರಿಸ್ಥಿತಿ ಎದುರಾಗಿದ್ದು, ಕೆಲವೊಂದು ಪರಿಹಾರ ಘೋಷಿಸಿದರೂ, ಅದು ಜನರಿಗೆ ತಲುಪುತ್ತಿಲ್ಲ. ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಮನ್ನಿಸದೆ, ಬಂಡವಾಳಶಾಹಿ, ಕಾರ್ಪೊರೇಟ್ ಕಂಪೆನಿಗಳಿಗೆ ಸಹಾಯಹಸ್ತ ಚಾಚಿ, ಕಾರ್ಮಿಕರನ್ನು ತುಳಿಯುವ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯ ಸುನೀಲ್ ಕುಮಾರ್ ಬಜಾಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ದೇಶದಲ್ಲಿ ಆದಾಯ ತೆರಿಗೆ ವ್ಯಾಪ್ತಿಯ ಹೊರಗಿನ ಜನರಿಗೆ 6 ತಿಂಗಳು ಮಾಸಿಕ 7,500 ರೂ ಪರಿಹಾರ ಧನ ನೀಡಬೇಕು, ಬೀಡಿ, ಟೈಲರ್, ಹೋಟೆಲ್ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಹಮಾಲಿಗಳು ಮೊದಲಾದ ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ 10 ಸಾವಿರ ರೂ. ಸಹಾಯಧನ ಘೋಷಿಸಬೇಕು ಮೊದಲಾದ ಬೇಡಿಕೆಗಳನ್ನೂ ಈಡೇರಿಸುವಂತೆ ಆಗ್ರಹಿಸಿ ಜು.3ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಲಾಗುವುದು ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಇಂಟಕ್ ಪ್ರಧಾನ ಕಾರ್ಯದರ್ಶಿ ಬಿ. ಚಿತ್ತರಂಜನ್ ಶೆಟ್ಟಿ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ವಿ.ರಾವ್, ಎಚ್‌ಎಂಎಸ್ ಮುಖಂಡ ಮುಹಮ್ಮದ್ ರಫಿ ಉಪಸ್ಥಿತರಿದ್ದರು.







