1971ರ ಪಾಕ್ ವಿರುದ್ಧದ ಯುದ್ಧದ ಹೀರೋ, ಮಾಜಿ ವಾಯುಸೇನೆ ಅಧಿಕಾರಿ ಪರ್ವೇಝ್ ಜಮಸ್ಜಿ ನಿಧನ

ಮುಂಬೈ: ಭಾರತ-ಪಾಕಿಸ್ತಾನ ನಡುವೆ 1971ರಲ್ಲಿ ನಡೆದ ಯುದ್ಧದಲ್ಲಿ ಹೋರಾಡಿದ್ದ ಹಾಗೂ ವೀರ ಚಕ್ರ ಶೌರ್ಯ ಪ್ರಶಸ್ತಿ ವಿಜೇತರಾಗಿದ್ದ ನಿವೃತ್ತ ಸ್ಕ್ವಾಡ್ರನ್ ಲೀಡರ್ ಪರ್ವೇಝ್ ಜಮಸ್ಜಿ (77) ನಿಧನರಾಗಿದ್ದಾರೆ.
ದಾದರ್‍ನ ಪಾರ್ಸಿ ಕಾಲನಿ ನಿವಾಸಿಯಾಗಿದ್ದ ಅವರು ಕೆಲ ಸಮಯದಿಂದ ಅನಾರೋಗ್ಯದಿಂದಿದ್ದರು. 1965ರಲ್ಲಿ ವಾಯುಸೇನೆ ಸೇರಿದ್ದ ಅವರು 1985ರಲ್ಲಿ ನಿವೃತ್ತರಾಗಿದ್ದರು.
“1971ರ ಡಿಸೆಂಬರ್ ನಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದ ಸಂದರ್ಭ ಲೆಫ್ಟಿನೆಂಟ್ ಪರ್ವೇಝ್ ರುಸ್ತುಂ ಜಮಸ್ಜಿ ಹೆಲಿಕಾಪ್ಟರ್ ಯುನಿಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಹಾರಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ಮೆಶಿನ್ ಗನ್ ಗಳಿಂದ 2 ಬಾರಿ ಮತ್ತು ಮೋರ್ಟರ್ ಗಳಿಂದ 2 ಬಾರಿ ದಾಳಿ ನಡೆಯಿತು. ಆ ಸಂದರ್ಭ ಸಮಯಪ್ರಜ್ಞೆ ತೋರಿದ್ದ ಅವರು ಹೆಲಿಕಾಪ್ಟರ್ ಅನ್ನು ನೆಲೆಗೆ ಮರಳಿ ತರುವಲ್ಲಿ ಯಶಸ್ವಿಯಾಗಿದ್ದರು” ಎಂದು ವೀರ ಚಕ್ರದಲ್ಲಿ ಉಲ್ಲೇಖಿಸಲಾಗಿದೆ.
ಯುದ್ಧದ ಸಂದರ್ಭ ಹೆಲಿಕಾಪ್ಟರ್ ಪೈಲಟ್ ಆಗಿದ್ದ ಅವರು, ಕಾಲಿಗೆ ಆದ ಗಂಭೀರ ಗಾಯದ ನಂತರ ವಾಕಿಂಗ್ ಸ್ಟಿಕ್ ಹಿಡಿದುಕೊಂಡೇ ನಡೆಯುತ್ತಿದ್ದರು. ಜಮಸ್ಜಿ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.





