ಮಕ್ಕಳಿಗೆ ಕೆಲ ಗಂಟೆಗಳ ಕಾಲ ಆನ್‍ಲೈನ್ ತರಗತಿ ನಡೆಸಬಹುದಲ್ಲವೇ: ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ

ಬೆಂಗಳೂರು, ಜೂ.26: ಎಲ್‍ಕೆಜಿಯಿಂದ 5ನೆ ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ತರಗತಿಗಳನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಮಕ್ಕಳಿಗೆ ಕೆಲ ಗಂಟೆಗಳ ಕಾಲವಾದರೂ ಆನ್‍ಲೈನ್ ತರಗತಿಗಳನ್ನು ನಡೆಸಬಹುದಲ್ಲವೇ ಎಂದು ಸರಕಾರವನ್ನು ಪ್ರಶ್ನಿಸಿದೆ.
ಎಲ್‍ಕೆಜಿಯಿಂದ 5ನೆ ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ತರಗತಿಗಳನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಪೋಷಕರು ಮತ್ತು ಕೆಲ ಶಾಲಾ ಆಡಳಿತ ಮಂಡಳಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ನ್ಯಾಯಪೀಠವು ಪ್ರತಿಕ್ರಿಯಿಸಿ, ಮೇಲ್ನೋಟಕ್ಕೆ ಸರಕಾರ ಏಕಾಏಕಿ ರದ್ದು ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಅಲ್ಲದೇ ಮಕ್ಕಳು ಆನ್ ಲೈನ್ ಮೂಲಕ ಶಿಕ್ಷಣ ಪಡೆಯಲು ಇಚ್ಛಿಸಿದರೆ ಸರಕಾರ ಏಕೆ ತಡೆಯಬೇಕು ಎಂದು ಪ್ರಶ್ನಿಸಿದೆ. ನ್ಯಾಯಪೀಠದ ಪ್ರಶ್ನೆಗೆ ಉತ್ತರಿಸಲು ಸರಕಾರಿ ವಕೀಲರು ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆಯನ್ನು ಜೂ.29ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲರು, ಬೇರೆ ರಾಜ್ಯಗಳಲ್ಲಿ ಆನ್‍ಲೈನ್ ತರಗತಿಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಆನ್‍ಲೈನ್ ತರಗತಿಗಳನ್ನು ನಿಷೇಧಿಸಲಾಗಿದೆ. ಇದು ಕಾನೂನು ಬಾಹಿರವಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಕೊರೋನ ಕಾರಣದಿಂದ ಶಾಲಾ, ಕಾಲೇಜುಗಳು ಬಂದ್ ಆಗಿದ್ದು, ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆರಂಭಿಸಿದ್ದವು. ಆದರೆ ಖಾಸಗಿ ಶಾಲೆಗಳ ಕ್ರಮಕ್ಕೆ ತಡೆ ಹಾಕಿದ ರಾಜ್ಯ ಸರಕಾರ ಎಲ್‍ಕೆಜಿಯಿಂದ 5ನೆ ತರಗತಿವರೆಗೂ ಆನ್‍ಲೈನ್ ಶಿಕ್ಷಣ ನಡೆಸದಂತೆ ಸೂಚನೆ ನೀಡಿ ಆದೇಶ ಜಾರಿ ಮಾಡಿತ್ತು. ಸರಕಾರದ ಕ್ರಮ ಪ್ರಶ್ನಿಸಿದ ಕೆಲ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿವೆ.







