ಗರಡಿಗಳ ಪೂಜಾರಿಗಳಿಗೆ ಮಾಸಾಶನ ಯೋಜನೆ ಸಾಕಾರಗೊಳ್ಳಲಿ: ಮಾಜಿ ಜಿಪಂ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಆಗ್ರಹ

ಶಂಕರ ಪೂಜಾರಿ
ಉಡುಪಿ, ಜೂ. 26: ಜಿಲ್ಲೆಯಲ್ಲಿರುವ ಬ್ರಹ್ಮ ಬೈದರ್ಕಳ ಗರಡಿಗಳ ಪೂಜಾ ಪೂಜಾರಿ (ಪೂ-ಪೂಜನ) ಮತ್ತು ದರ್ಶನ ಪಾತ್ರಿಗಳಿಗೆ ಮಾಸಾಶನ ನೀಡುವ ಯೋಜನೆಯನ್ನು ತಕ್ಷಣವೇ ಸಾಕಾರಗೊಳಿಸಬೇಕು ಮತ್ತು ಕಾರ್ಕಳದಲ್ಲಿ ಸ್ಥಾಪಿಸಲಾದ ಕೋಟಿ- ಚೆನ್ನಯ ಥೀಮ್ ಪಾರ್ಕ್ನ ವಿಸ್ತೃತ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪಂಚಾಯತ್ನ ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಆಗ್ರಹಿಸಿದ್ದಾರೆ.
2010-2011ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದ ಅವಧಿ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯರ ಮುತುವರ್ಜಿಯಿಂದ 7 ಮಂದಿ ವಯೋವೃದ್ಧ ಗರಡಿ ಪೂಜಾರಿಗಳಿಗೆ ತಲಾ ಒಂದು ಸಾವಿರದಂತೆ ಮಾಸಾಶನ ಮಂಜೂರಾಗಿತ್ತು. ತಿಂಗಳೆ ಗರಡಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಚಿವರ ಸೂಚನೆಯಂತೆ ತಾನೇ ಮಂಜೂರಾತಿ ಪತ್ರ ವಿತರಿಸಿದ್ದೆ ಎಂದು ತಿಳಿಸಿದ ಅವರು ಈ ಪ್ರಕ್ರಿಯೆಯಲ್ಲಿ ಉಡುಪಿಯ ಬೈದಶ್ರೀ ಪ್ರತಿಷ್ಠಾನದ ಶ್ರಮವನ್ನು ಸ್ಮರಿಸಿದ್ದಾರೆ. ಆದರೆ ಬಳಿಕ ಸ್ಥಗಿತಗೊಂಡ ಮಾಸಾಶನ ಮಂಜೂರಾತಿ ಪ್ರಕ್ರಿಯೆಯನ್ನು ಮತ್ತೆ ಪ್ರಾರಂಬಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಕಾರ್ಕಳದಲ್ಲಿ ಕೋಟಿ-ಚೆನ್ನಯ ಥೀಮ್ ಪಾರ್ಕ್ ಸ್ಥಾಪನೆಗೆ ಸರಕಾರದಿಂದ ಅನುಮೋದನೆ ಸಿಕ್ಕಿ ಸುಮಾರು 90 ಎಕರೆಯಷ್ಟು ಸ್ಥಳವನ್ನು ಕೂಡ ಮಂಜೂರು ಗೊಳಿಸಲಾಯಿತು. ಥೀಮ್ ಪಾರ್ಕ್ನ ಪ್ರಥಮ ಹಂತದ ಕೆಲಸ ಆಗಿದೆ. ಆದರೆ ಕಳೆದ 10 ವರ್ಷಗಳಿಂದ ವಿಸ್ತೃತ ಯೋಜನೆ ಕಾರ್ಯಗತವಾಗಿಲ್ಲ. ಕೋಟಿ-ಚೆನ್ನಯರ ತಾಯಿ ’ದೇಯಿ ಬೈದಿತಿ’ ಹೆಸರಿನಲ್ಲಿ ಔಷಧೀಯ ವನ ನಿರ್ಮಾಣ ಆಗಬೇಕಿದೆ. ತುಳುನಾಡಿನ ಜನರ ಬದುಕಿಗೆ ಜೀವನ ವಿಧಾನ ರೂಪಿಸಿದ ನಾಗ, ಭೂತ, ದೈವಗಳ ಪರಿಕಲ್ಪನೆ, ಅವಳಿ ವೀರರ ಸಮಕಾಲೀನ ರಾದ ಕಾಂತಬಾರೆ-ಬೂದಬಾರೆಯರು, ಕಂಬೆರ್ಲ್, ಮುಗ್ಗೇರ್ಕಳ, ಬಬ್ಬರ್ಯ ಮುಂತಾದ ದೈವೀ ಶಕ್ತಿಗಳ ವಿವರ ಸಂಗ್ರಹ ಮತ್ತು ಎಲ್ಲ ದೈವಗಳಿಗೆ ಸಂಬಂಧಿಸಿದ ವಿವರ ಸಂಗ್ರಹ ಆಗಬೇಕಿದೆ.
ಇದು ತುಳುನಾಡಿನ ಎಲ್ಲಾ ತುಳುವರ ಆಶಯವಾಗಿದೆ. ಸಂಬಂಧ ಪಟ್ಟ ಸಚಿವರು, ಜನಪ್ರತಿನಿಧಿಗಳು, ಒಮ್ಮತದಿಂದ ಜನರ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕೆಂದು ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಕಟಪಾಡಿ ಶಂಕರ ಪೂಜಾರಿ ಒತ್ತಾಯಿಸಿದ್ದಾರೆ.







