ಸಾರಿಗೆ ಸಂಸ್ಥೆಯ ಗರ್ಭಿಣಿ ಮಹಿಳಾ ಸಿಬ್ಬಂದಿಗಳು ಲಘು ಕೆಲಸಕ್ಕೆ ನಿಯೋಜನೆ: ಶಿವಯೋಗಿ ಕಳಸದ
ಬೆಂಗಳೂರು, ಜೂ.26: ಸಾರಿಗೆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಗರ್ಭಿಣಿ ಮಹಿಳಾ ಸಿಬ್ಬಂದಿಗಳಿಗೆ ಲಘು ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.
ಸಾರಿಗೆ ಸಂಸ್ಥೆಗಳ ಮಹಿಳಾ ನಿರ್ವಾಹಕಿ, ಚಾಲಕಿ, ತಾಂತ್ರಿಕ ಸಿಬ್ಬಂದಿ ಮತ್ತು ಮಾರ್ಗ ತಪಾಸಣೆ ಕರ್ತವ್ಯ ನಿರ್ವಹಿಸುವ ಮಹಿಳಾ ತನಿಖಾ ಸಿಬ್ಬಂದಿಗಳು ಗರ್ಭಿಣಿ ಆಗಿರುವ ಕುರಿತು ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಿದರೆ, 3ರಿಂದ 6ನೇ ತಿಂಗಳ ಅವಧಿಯಲ್ಲಿ ಅವರಿಗೆ ಲಘು ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಲಾಗುವುದು.
ಗರ್ಭಿಣಿ ಮಹಿಳಾ ಸಿಬ್ಬಂದಿಗಳಿಗೆ 7ನೇ ತಿಂಗಳ ಆರಂಭದಿಂದಲೇ 90 ದಿನ ಹೆರಿಗೆ ಪೂರ್ವ ಹಾಗೂ 90 ದಿನ ಹೆರಿಗೆ ನಂತರದ ರಜೆಯನ್ನು ನೀಡಲಾಗುವುದು. ಹಾಗೂ ಹೆರಿಗೆ ರಜೆ ಮುಕ್ತಾಯವಾದ ನಂತರ 3 ತಿಂಗಳ ಅವಧಿಗೆ ಅವರ ಖಾತೆಯಲ್ಲಿರುವ ರಜೆಯನ್ನು ಮಂಜೂರು ಮಾಡುವುದು. ಒಂದು ವೇಳೆ ಅವರ ಖಾತೆಯಲ್ಲಿ ರಜೆ ಇಲ್ಲದಿದ್ದಲ್ಲಿ, ಸಂಸ್ಥೆಯ ನೌಕರರ ರಜಾ ನಿಯಮಾವಳಿ ಅನ್ವಯ ಲೆಕ್ಕದಲ್ಲಿಲ್ಲದ ರಜೆಯನ್ನು ಮಂಜೂರು ಮಾಡುವುದು ಹಾಗೂ ಅವರು ಇಚ್ಛಿಸಿದ್ದಲ್ಲಿ ಮಗುವಿಗೆ ಒಂದು ವರ್ಷ ತುಂಬುವವರಿಗೆ ವೇತನ ರಹಿತ ರಜೆಗೆ ಅವಕಾಶ ಕಲ್ಪಿಸಲಾಗುವುದು.
ಮೊದಲ ಎರಡು ತಿಂಗಳು ಗರ್ಭಧಾರಣೆ ಅವಧಿಯಲ್ಲಿ ಮಹಿಳಾ ಸಿಬ್ಬಂದಿ ಬಯಸಿದ್ದಲ್ಲಿ ಅಥವಾ ವೈದ್ಯರು ಸೂಚಿಸಿದ್ದಲ್ಲಿ ಅವಶ್ಯಕತೆಗೆ ಅನುಗುಣವಾಗಿ ರಜೆ ಮಂಜೂರು ಮಾಡಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







