ವೃಷಭಾವತಿ ಕಾಲುವೆ ತಡೆಗೋಡೆ ಕುಸಿತ: 'ಕಳಪೆ ಕಾಮಗಾರಿ' ವಿರುದ್ಧ ಆಪ್ ದೂರು

ಬೆಂಗಳೂರು, ಜೂ.26: ಗುರುವಾರ ಸಂಜೆ ಆರು ಗಂಟೆಯ ಆಸುಪಾಸಿನಲ್ಲಿ ನಗರದಲ್ಲಿ ಬಿದ್ದ ಮಳೆಯಿಂದಾಗಿ ಕೆಂಗೇರಿ ಬಳಿಯಿರುವ ವೃಷಭಾವತಿ ಕಾಲುವೆಗೆ ನಿರ್ಮಿಸಲಾಗಿದ್ದ ತಡೆಗೋಡೆ ಕೊಚ್ಚಿ ಹೋಗಿರುವ ವಿಷಯ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ ಎಂದು ಬೆಂಗಳೂರು ಮೆಟ್ರೋಪಾಲಿಟಿನ್ ಟಾಸ್ಕ್ ಫೋರ್ಸ್ ಎಸ್ಪಿಗೆ ಆಮ್ ಆದ್ಮಿ ಪಕ್ಷ ದೂರು ನೀಡಿದೆ.
ಕೆಲವೇ ತಿಂಗಳ ಹಿಂದೆ ನಿರ್ಮಾಣವಾಗಿದ್ದ ಈ ತಡೆಗೋಡೆ ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿಯಾಗಿದ್ದು, ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತರುವ ರೀತಿಯದ್ದಾಗಿದೆ. ಈ ಕಾಮಗಾರಿಯನ್ನು ಕೈಗೊಂಡಿರುವ ಬಿಬಿಎಂಪಿಯ ಸಂಬಂಧಿಸಿದ ಜಂಟಿ ಆಯುಕ್ತರು, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಹಾಗೂ ಈ ಕಾಮಗಾರಿಯನ್ನು ಮಾಡಿರುವ ಗುತ್ತಿಗೆದಾರ ಅಥವಾ ಸಂಸ್ಥೆಯವರು ಅಕ್ರಮ ಕೂಟವನ್ನು ರಚಿಸಿಕೊಂಡು ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತರುವಂತಹ ರೀತಿಯಲ್ಲಿ ಈ ತಡೆಗೋಡೆ ನಿರ್ಮಾಣ ಕಾಮಗಾರಿಯಲ್ಲಿ ಭಾರೀ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ತೆರಿಗೆದಾರರ ಹಣವನ್ನು ಹಾಗೂ ಬಿಬಿಎಂಪಿಯ ಹಣವನ್ನು ಲಪಟಾಯಿಸಲು ಈ ರೀತಿಯ ಕಳಪೆ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಸಂಚು ಹೂಡಿ ಮಾಡಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುರೇಶ್ ರಾಥೋಡ್ ದೂರಿದ್ದಾರೆ.
ಇವರ ಭ್ರಷ್ಟಾಚಾರ, ನಿರ್ಲಕ್ಷ್ಯತನ, ಬೇಜವ್ದಾರಿತನ ಹಾಗೂ ಕಳಪೆ ಕಾಮಗಾರಿಯಿಂದಾಗಿ ಬಿಬಿಎಂಪಿಗೆ ಕೋಟ್ಯಂತರ ರೂ.ಗಳ ನಷ್ಟವಾಗಿದೆ. ಇದಲ್ಲದೆ, ಸಾರ್ವಜನಿಕರ ಪ್ರಾಣದಲ್ಲಿ ಇವರು ಚೆಲ್ಲಾಟವಾಡುವ ಮೂಲಕ ಬಿಬಿಎಂಪಿಯ ಕೋಟ್ಯಂತರ ರೂ.ಗಳನ್ನು ಈ ರೀತಿಯ ಮೋಸದ ಚಟುವಟಿಕೆಗಳ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
ಇದೊಂದು ಗುರುತರವಾದ ಅಪರಾಧವಾಗಿದ್ದು, ಕೂಡಲೆ ಮೇಲ್ಕಂಡ ಸಂಬಂಧಿಸಿದ ಎಲ್ಲ ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಎಫ್‍ಐಆರ್ ದಾಖಲಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
.jpg)







