ಈ ನಾಲ್ಕು ರಾಜ್ಯಗಳಲ್ಲಿ ಕೋವಿಡ್ ಸಾವು ಸಂಭವಿಸಿಲ್ಲ
ಹೊಸದಿಲ್ಲಿ, ಜೂ.27: ದೇಶದಲ್ಲಿ ಕೋವಿಡ್-19 ಸೋಂಕಿನಿಂದ 15 ಸಾವಿರಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದರೂ, ಈಶಾನ್ಯ ರಾಜ್ಯಗಳಾದ ಮಣಿಪುರ, ಮಿಝೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂನಲ್ಲಿ ಇದುವರಗೆ ಯಾರೂ ಈ ಮಾರಕ ಸೋಂಕಿಗೆ ಬಲಿಯಾಗಿಲ್ಲ.
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ಸೋಂಕಿನ ಪ್ರಮಾಣ ಕೂಡಾ ಈ ರಾಜ್ಯಗಳಲ್ಲಿ ಕನಿಷ್ಠ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಈ ರಾಜ್ಯಗಳಲ್ಲಿ ಕೋವಿಡ್-19 ಸೋಂಕು ಪರೀಕ್ಷಾ ವ್ಯವಸ್ಥೆ, ಕೋವಿಡ್-19 ಚಿಕಿತ್ಸೆಗೆ ಆಸ್ಪತ್ರೆಗಳು ಇಲ್ಲದ ಕಾರಣ ವೈರಸ್ ಸೋಂಕಿನ ವಿರುದ್ಧದ ಹೋರಾಟಕ್ಕೆ ಆರಂಭದಲ್ಲಿ ತಡೆ ಉಂಟಾಗಿದ್ದರೂ, ಇದೀಗ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಈ ನಾಲ್ಕು ರಾಜ್ಯಗಳಲ್ಲಿ ಒಟ್ಟು 3,731 ಸಕ್ರಿಯ ಪ್ರಕರಣಗಳಿದ್ದು, 5,715 ಮಂದಿ ಚೇರಿಸಿಕೊಂಡಿದ್ದಾರೆ. ಇಡೀ ಈಶಾನ್ಯ ಭಾರತದಲ್ಲಿ ಸಾವಿನ ಸಂಖ್ಯೆ ಕೇವಲ 12 ಎಂದು ಸಚಿವಾಲಯ ಅಂಕಿಅಂಶ ಬಿಡುಗಡೆ ಮಾಡಿದೆ. ಈ ಪ್ರದೇಶದಲ್ಲಿ ಪರೀಕ್ಷಾ ಸೌಲಭ್ಯದ ಕೊರತೆ ವ್ಯಾಪಕವಾಗಿ ಕಾಡುತ್ತಿತ್ತು. ಆದರೆ ಕೇಂದ್ರ ಸರ್ಕಾರ ಆರೋಗ್ಯ ಸಚಿವಾಲಯದ ಮೂಲಕ ಹಸ್ತಕ್ಷೇಪ ಮಾಡಿದ ಪರಿಣಾಮ ಇಂದು 39 ಪರೀಕ್ಷಾ ಕೇಂದ್ರಗಳು ಸರ್ಕಾರಿ ವಲಯದಲ್ಲಿ ಹಾಗೂ 42 ಪ್ರಯೋಗಾಲಯಗಳು ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವಾಲಯ ವಿವರಿಸಿದೆ.