ಜಾಹೀರಾತುದಾರರಿಂದ ಬಹಿಷ್ಕಾರ ಅಭಿಯಾನ: ಹಾನಿಕಾರಕ ಪೋಸ್ಟ್ ಗಳನ್ನು ಲೇಬಲ್ ಮಾಡುವುದಾಗಿ ಹೇಳಿದ ಫೇಸ್ ಬುಕ್

ವಾಷಿಂಗ್ಟನ್: ಹಾನಿಕರವೆಂದು ತಿಳಿಯಲಾದ ಪೋಸ್ಟ್ ಗಳನ್ನು ಫೇಸ್ ಬುಕ್ ಅವುಗಳ ಸುದ್ದಿ ಮೌಲ್ಯಕ್ಕಾಗಿ ತೋರಿಸುವುದಾದರೂ ಅವುಗಳನ್ನು ಹಾನಿಕರ ಎಂದು ಲೇಬಲ್ ಮಾಡಲಿದೆ ಎಂದು ಸಿಇಒ ಮಾರ್ಕ್ ಝುಕರ್ಬರ್ಗ್ ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪೋಸ್ಟ್ ಗಳ ಸಹಿತ ಫೇಸ್ ಬುಕ್ ಫೀಡ್‍ನಲ್ಲಿ ಬರುವ ಸುದ್ದಿಗಳನ್ನು ಸಂಸ್ಥೆ ಪರಿಶೀಲಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸುಧಾರಿಸಬೇಕೆಂಬ ಕುರಿತಂತೆ ಸಾಕಷ್ಟು ಒತ್ತಡವನ್ನು ಫೇಸ್ ಬುಕ್ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹಾನಿಕಾರಕವೆಂದು ತಿಳಿಯಲಾದ ಪೋಸ್ಟ್ ಗಳನ್ನು ಲೇಬಲ್ ಮಾಡಲು ಸಂಸ್ಥೆ ನಿರ್ಧರಿಸಿದೆ.
ಸದ್ಯ ಫೇಸ್ ಬುಕ್ ಅನ್ನು ಬಹಿಷ್ಕರಿಸುವ ಅಭಿಯಾನಕ್ಕೆ 90ಕ್ಕೂ ಹೆಚ್ಚು ಜಾಹೀರಾತುದಾರರು ಸೇರಿಕೊಂಡಿದ್ದು ಈ ಪಟ್ಟಿಯಲ್ಲಿ ಯುನಿಲಿವರ್ ಕೂಡ ಶುಕ್ರವಾರ ಸೇರಿದೆಯಲ್ಲದೆ "ಅಮೆರಿಕಾದಲ್ಲಿ ಧ್ರುವೀಕೃತ ಚುನಾವಣಾ ಅವಧಿ,'' ಎಂಬ ಕಾರಣವನ್ನೂ ನೀಡಿದೆ.
ಈಗಾಗಲೇ ಡವ್ ಸೋಪ್ ಹಾಗೂ ಬೆನ್ & ಜೆರ್ರೀಸ್ ಐಸ್ ಕ್ರೀಮ್ ಕೂಡ ತಾವು ಟ್ವಿಟರ್, ಫೇಸ್ ಬುಕ್ ಹಾಗೂ ಇನ್‍ಸ್ಟಾಗ್ರಾಂನಲ್ಲಿ ಅಮೆರಿಕಾದಲ್ಲಿ ಕನಿಷ್ಠ ಈ ವರ್ಷ ಜಾಹೀರಾತು ನಿಲ್ಲಿಸುವುದಾಗಿ ಹೇಳಿವೆ.
ವಿವಿಧ ಪಂಗಡಗಳನ್ನು ವರ್ಣಿಸುವ ಮುಖ್ಯವಾಗಿ ಜನಾಂಗ ಹಾಗೂ ಇಮ್ಮಿಗ್ರೇಶನ್ ಸ್ಥಾನಮಾನದ ಆಧಾರದಲ್ಲಿ ವರ್ಣಿಸುವ ಜಾಹೀರಾತುಗಳನ್ನು ಫೇಸ್ ಬುಕ್ ನಿಷೇಧಿಸಲಿದೆ ಹಾಗೂ ಹಿಂಸೆಯನ್ನು ಪ್ರಚೋದಿಸುತ್ತದೆ ಅಥವಾ ಮತದಾನವನ್ನು ತಡೆಯಲು ಯತ್ನಿಸುತ್ತದೆ ಎಂದು ತಿಳಿದ ಯಾವುದೇ ಪೋಸ್ಟ್, ಅದು ರಾಜಕಾರಣಿಯದ್ದೇ ಆಗಿರಲಿ ಅದನ್ನು ತೆಗೆದು ಹಾಕುವುದು ಎಂದು ಝುಕರ್ಬರ್ಗ್ ಹೇಳಿದ್ದಾರೆ.







