ಕೊರೋನದಿಂದ ಮೃತಪಟ್ಟ ವೃದ್ಧನ ಮೃತದೇಹವನ್ನು ಜೆಸಿಬಿಯಲ್ಲಿ ಸಾಗಿಸಿದರು!

ಹೈದರಾಬಾದ್: ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಳಸ ಪಟ್ಟಣದಲ್ಲಿನ ತನ್ನ ಮನೆಯಲ್ಲಿ ಮೃತಪಟ್ಟ 70 ವರ್ಷದ ಕೋವಿಡ್-19 ಸೋಂಕಿತ ವ್ಯಕ್ತಿಯ ಕಳೇಬರವನ್ನು ಆತನ ಮನೆಯಿಂದ ರುದ್ರಭೂಮಿಗೆ ಜೆಸಿಬಿಯೊಂದರಲ್ಲಿ ಸಾಗಿಸಿದ ಘಟನೆ ರಾಜ್ಯದಲ್ಲಿ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ನಗರಾಡಳಿತವು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದ ವೇಳೆ ಈ 70 ವರ್ಷದ ವ್ಯಕ್ತಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು.
ನಂತರ ಅವರು ಮನೆಯಲ್ಲಿ ಮೃತಪಟ್ಟಾಗ ಮೃತದೇಹ ಸಾಗಿಸುವಾಗ ತಮಗೆ ಸೋಂಕಿನ ಅಪಾಯವಿದೆಯೆಂದು ನೆರೆಹೊರೆಯವರು ಆತಂಕ ವ್ಯಕ್ತಪಡಿಸಿದ್ದು, ಸರಕಾರಿ ಸ್ವಯಂಸೇವಕಿಯಾಗಿರುವ ಮೃತರ ಮೊಮ್ಮಗಳು ಮುನಿಸಿಪಲ್ ಆಡಳಿತಕ್ಕೆ ಮಾಹಿತಿ ನೀಡಿದ್ದರು. ನಂತರ ಜೆಸಿಬಿಯಲ್ಲಿ ಮೃತದೇಹವನ್ನು ರುದ್ರಭೂಮಿಗೆ ಸಾಗಿಸಲಾಗಿತ್ತು. ಈ ಘಟನೆಯ ವೀಡಿಯೋ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇದೊಂದು ಅಮಾನವೀಯ ಕೃತ್ಯ, ಕೋವಿಡ್ ರೋಗಿಯ ಮೃತದೇಹ ಸಾಗಿಸುವಾಗ ಸೂಕ್ತ ಮಾರ್ಗಸೂಚಿ ಅನುಸರಿಸಲಾಗಿಲ್ಲ ಎಂದು ವಿಪಕ್ಷಗಳು ಆಕ್ಷೇಪ ಸೂಚಿಸಿವೆ.
ಘಟನೆಯನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಖಂಡಿಸಿದ್ದಾರಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆಯನ್ನೂ ನೀಡಿದ್ದಾರೆ. ಘಟನೆಯ ತನಿಖೆಗೆ ರಾಜ್ಯ ಸರಕಾರ ಆದೇಶಿಸಿದೆ.







