ಕಲಬುರಗಿ: ಪರೀಕ್ಷೆಗೆ ಓದುತ್ತಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ; ಆರೋಪ
ದೂರು ನೀಡಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ ವಿದ್ಯಾರ್ಥಿನಿ
ಕಲಬುರಗಿ, ಜೂ.27: ಎಸೆಸೆಲ್ಸಿ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಇಲ್ಲಿನ ಕಮಲಾಪುರ ತಾಲೂಕಿನ ತಾಂಡವೊಂದರಲ್ಲಿ ಕಳೆದ ಬುಧವಾರ(ಜೂ.24) ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿ ಜೂ.24ರ ರಾತ್ರಿ ತನ್ನ ಮನೆಯ ಅಂಗಳದ ಬೀದಿದೀಪದ ಬೆಳಕಿನಲ್ಲಿ ಎಸೆಸೆಲ್ಸಿ ಇಂಗ್ಲಿಷ್ ಪರೀಕ್ಷೆಗಾಗಿ ಓದುತ್ತಾ ಕುಳಿತಿದ್ದಾಳೆ. ಈ ವೇಳೆ ಮಾತನಾಡಿಸುವ ನೆಪದಲ್ಲಿ ಬಂದ ಆರೋಪಿ ಆಕೆಯ ಬಾಯಿಯನ್ನು ಬಟ್ಟೆಯಿಂದ ಮುಚ್ಚಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ವಿದ್ಯಾರ್ಥಿನಿ ಜೋರಾಗಿ ಕೂಗಿಕೊಂಡಿದ್ದರಿಂದ ನೆರೆಹೊರೆಯವರು ಘಟನಾ ಸ್ಥಳಕ್ಕೆ ಧಾವಿಸುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಬಗ್ಗೆ ವಿದ್ಯಾರ್ಥಿನಿ ಮರುದಿನ ಬೆಳಗ್ಗೆ ರಠಕಲ್ ಪೊಲೀಸ್ ಠಾಣೆಗೆ ದೂರು ನೀಡಿ, ಅಲ್ಲಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಇಂಗ್ಲಿಷ್ ವಿಷಯದ ಪರೀಕ್ಷೆ ಬರೆದು ಬಂದಿದ್ದಾಳೆ ಎಂದು ತಿಳಿದುಬಂದಿದೆ.
Next Story