ಕೊಡಗು ಎಸ್‌ಪಿಯಾಗಿ ಕ್ಷಮಾ ಮಿಶ್ರಾ, ಚಿಕ್ಕಮಗಳೂರು ಎಸ್‌ಪಿಯಾಗಿ ಅಕ್ಷಯ್ ಮಚೀಂದ್ರ ಅಧಿಕಾರ ಸ್ವೀಕಾರ

ಮಡಿಕೇರಿ, ಜೂ.27: ಕೊಡಗು ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ 2016ನೇ ಕರ್ನಾಟಕ ಬ್ಯಾಚ್ ನ ಕ್ಷಮಾ ಮಿಶ್ರಾ ಅವರು ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಎಸ್‌ಪಿ ಡಾ.ಸುಮನ್ ಡಿ.ಪನ್ನೇಕರ್ ಅವರು ನಗರದ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಸುಮನ್ ಅವರನ್ನು ಬೆಂಗಳೂರಿನ ಪೊಲೀಸ್ ಕೇಂದ್ರ ಸ್ಥಾನದಲ್ಲಿರುವ ಸಿಎಆರ್ ಯೂನಿಟ್ ನ ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ಆಗಿ ವರ್ಗಾವಣೆ ಮಾಡಲಾಗಿದೆ.
ಕ್ಷಮಾ ಮಿಶ್ರಾ ಅವರು ಬೆಂಗಳೂರು ಸಿಐಡಿ ವಿಭಾಗದಲ್ಲಿ ಎಸ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ನೂತನ ಎಸ್‌ಪಿ ಅಕ್ಷಯ್ ಮಚೀಂದ್ರ ಅಧಿಕಾರ ಸ್ವೀಕಾರ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಪಾಂಡೆ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಹಕಾಯ್ ಅಕ್ಷಯ್ ಮಚೇಂದ್ರ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಸರಕಾರದ ಆದೇಶದ ಹಿನ್ನೆಲೆಯಲ್ಲಿ ಶನಿವಾರ ಚಿಕ್ಕಮಗಳೂರು ನಗರದ ಎಸ್‌ಪಿ ಕಚೇರಿಯಲ್ಲಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಎಸ್‌ಪಿ ಹರೀಶ್ ಪಾಂಡೆ ನೂತನ ಎಸ್‌ಪಿ ಮಚೀಂದ್ರ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಹಕಾಯ್ ಅಕ್ಷಯ್ ಮಚೀಂದ್ರ ಅವರು ಈ ಹಿಂದೆ ಬೆಂಗಳೂರಿನಲ್ಲಿ ರಾಜ್ಯ ಗುಪ್ತಚರ ಇಲಾಖೆಯಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದು, ಬೆಂಗಳೂರು, ಉಡುಪಿಯಲ್ಲಿ ಪ್ರೊಬೇಷನರಿಯಾಗಿ ಕರ್ತವ್ಯ ನಿರ್ವಹಿದ್ದು, ಇವರು 2015ರ ಐಪಿಎಸ್ ಬ್ಯಾಚ್‍ನ ಕೇಡರ್ ಆಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಇದುವರೆಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಪಾಂಡೆ ಅವರು ರಾಜ್ಯ ಗುಪ್ತಚರ ಇಲಾಖೆಯಲ್ಲಿ ಮಚೇಂದ್ರ ಅವರ ಸ್ಥಾನಕ್ಕೆ ನೇಮಕಗೊಂಡಿದ್ದು, ಶನಿವಾರ ಅವರು ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ್ದಾರೆಂದು ತಿಳಿದು ಬಂದಿದೆ.
.jpg)







