ಉಡುಪಿ: ನಿಟ್ಟೂರಿನ ಹಡಿಲು ಗದ್ದೆಗಳಲ್ಲಿ ಮತ್ತೆ ಕೃಷಿ ಅಭಿಯಾನ

ಉಡುಪಿ, ಜೂ.27: ಕಳೆದ ಕೆಲವು ವರ್ಷಗಳಿಂದ ಆಸುಪಾಸಿನ ಹಡಿಲು ಗದ್ದೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳ ಮೂಲಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಮಕ್ಕಳಿಗೂ ಜೀವನ ಪಾಠವನ್ನು ಕಲಿಸಿಕೊಡುತ್ತಿರುವ ನಿಟ್ಟೂರು ಪ್ರೌಢಶಾಲೆ ‘ಸುವರ್ಣ ವರ್ಷ’ದಲ್ಲಿ ಕೈಗೊಂಡ ಹಡಿಲು ಗದ್ದೆ ಕೃಷಿ ಅಭಿಯಾನವನ್ನು ನಿಟ್ಟೂರಿನ ಗದ್ದೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಸಾಂಕೇತಿಕವಾಗಿ ನೇಜಿಯನ್ನು ಕ್ರಿಯಾ ಸಮಿತಿಯ ಸಂಚಾಲಕರಾದ ರಂಜನ್ ಶೆಟ್ಟಿ ಇವರಿಗೆ ಹಸ್ತಾಂತರಿಸುವ ಮೂಲಕ ಇತ್ತೀಚೆಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ತಾನು ಸಹ ಕೃಷಿ ಕುಟುಂಬ ದಿಂದ ಬಂದವನು. ಕೃಷಿಯನ್ನು ಶೃದ್ಧೆಯಿಂದ ಆಧುನಿಕ ಪದ್ಧತಿ ಯೊಂದಿಗೆ ಮಾಡಿದಲ್ಲಿ ಖಂಡಿತವಾಗಿಯೂ ಒಳ್ಳೆಯ ಆದಾಯಕ್ಕೆ ಮೋಸವಾಗಲಾರದು. ಕೊರೋನದ ಸಂಕಷ್ಟ ಕಾಲದಲ್ಲಿ ನಿರುದ್ಯೋಗಿಗಳಿಗೆ ಕೃಷಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ ಎಂದರು.
ಹಡಿಲು ಬಿಟ್ಟ ಗದ್ದೆಗಳನ್ನು ಮತ್ತೆ ಕೃಷಿಗೆ ಬಳಸುವ ಪ್ರಕ್ರಿಯೆ ಒಂದು ಚಳವಳಿ ರೂಪದಲ್ಲಿ ಬೆಳೆಯಬೇಕಾಗಿದೆ. ಗದ್ದೆಯನ್ನು ಹಡಿಲು ಬಿಡುವುದು ಕಾನೂನಾ ತ್ಮಕವಾಗಿಯೂ ಸಮ್ಮತವಾದುದಲ್ಲ. ಈ ಅಭಿಯಾನಕ್ಕೆ ನನ್ನ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹವಿದೆ ಎಂದು ಜಗದೀಶ್ ನುಡಿದರು.
ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಕೃಷಿ ಕಾಯಕ ಅದೊಂದು ದೇಶ ಸೇವೆ. ನಮ್ಮ ಹಿರಿಯರ ಪ್ರಕಾರ ಕೃಷಿ ಭೂಮಿಯನ್ನು ಹಡಿಲು ಬಿಡುವುದು ಮಹಾ ಪಾಪವಿದ್ದಂತೆ. ಕೃಷಿ ಭೂಮಿಯನ್ನು ಎಂದಿಗೂ ಬರಡು ಬಿಡಬಾರದು ಎಂದರು.
ಶಾಲಾ ಮುಖ್ಯಶಿಕ್ಷಕ ಮುರಲಿ ಕಡೆಕಾರ್ ಮಾತನಾಡಿ, ನಿಟ್ಟೂರಿನಲ್ಲಿ ಉದ್ಘಾಟನೆಗೊಂಡ ಈ ಅಭಿಯಾನ ಮುಂದೆ ಪುತ್ತೂರು, ಕಕ್ಕುಂಜೆ, ಕರಂಬಳ್ಳಿ ಹಾಗೂ ಪೆರಂಪಳ್ಳಿಯಲ್ಲಿ ಸುಮಾರು 50 ಎಕ್ರೆ ಹಡಿಲು ಗದ್ದೆ ನಾಟಿ ಕಾರ್ಯದ ಮೂಲಕ ಮುನ್ನಡೆಯಲಿದೆ. ಇದರಿಂದ ಪ್ರೇರಿತರಾಗಿ ಸುಮಾರು 10 ಎಕ್ರೆ ಗದ್ದೆ ಬೇಸಾಯ ಮಾಡಲು ಕೃಷಿಕರು ಮುಂದೆ ಬಂದಿದ್ದಾರೆ. ಸುಮಾರು 25 ಎಕ್ರೆ ಗದ್ದೆ ನಾಟಿ ಯಂತ್ರದ ಮೂಲಕ ಆಧುನಿಕ ವಿಧಾನದಲ್ಲಿ ನೆರವೇರಲಿದೆ. ಉಳಿದ ಗದ್ದೆಗಳನ್ನು ಕೈಯಲ್ಲಿ ನಾಟಿ ಮಾಡಲು ಹಳೆವಿದ್ಯಾರ್ಥಿಗಳು, ರಕ್ಷಕರು ಹಾಗೂ ವಿದ್ಯಾರ್ಥಿಗು ಸಜ್ಜಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗದ್ದೆಯ ಮಾಲಕರಿಗೆ ಸಾಗುವಾನಿ ಗಿಡ ನೀಡಿ ಗೌರವಿಸ ಲಾಯಿತು. ಸ್ಥಳೀಯ ಕೌನ್ಸಿಲರ್ ಸಂತೋಷ್ ಜತ್ತನ್, ಕಕ್ಕುಂಜೆ ಕೌನ್ಸಿಲರ್ ಬಾಲಕೃಷ್ಣ ಶೆಟ್ಟಿ, ನಿಟ್ಟೂರು ಎಜುಕೇಶನಲ್ ಸೊಸೈಟಿಯ ಉಪಾಧ್ಯಕ್ಷ ಎಸ್.ವಿ. ಭಟ್, ಕಾರ್ಯದರ್ಶಿ ಭಾಸ್ಕರ ಡಿ. ಸುವರ್ಣ, ವೇಣುಗೋಪಾಲ ಆಚಾರ್ಯ, ಹಾಗೂ ಶಾಲಾ ಹಳೆವಿದ್ಯಾರ್ಥಿಗಳಾದ ಪ್ರದೀಪ್ ಜೋಗಿ, ಪಿ. ದಿನೇಶ್ ಪೂಜಾರಿ, ಸಂತೋಷ್ ಕರ್ನೇಲಿಯೊ, ಹರೀಶ್ ಆಚಾರ್ಯ, ಡಾ. ಪ್ರತಿಮಾ ಜಯಪ್ರಕಾಶ್, ಶಶಿಪ್ರಭಾ ಕಾರಂತ್, ಡೊನಾಲ್ಡ್ ಡಿಸೋಜ, ರಾಕೇಶ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಬಳಿಕ ಮಹಾಬಲ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಅರ್ಧ ಎಕ್ರೆ ಗದ್ದೆಯನ್ನು ಶಾಲಾ ಹಳೆವಿದ್ಯಾರ್ಥಿಗಳು ಮತ್ತು ಊರವರು ಸೇರಿ ಕೈಯಲ್ಲಿ ನಾಟಿ ಮಾಡಿದು









