ಪಿಟಿಐಯನ್ನು ‘ದೇಶ ವಿರೋಧಿ’ ಎಂದ ಪ್ರಸಾರ ಭಾರತಿ
ಮೋದಿ ಹೇಳಿಕೆಗೆ ವ್ಯತಿರಿಕ್ತವಾಗಿ ಭಾರತದ ಚೀನಾ ರಾಯಭಾರಿಯ ಹೇಳಿಕೆ ಪ್ರಕಟ
ಹೊಸದಿಲ್ಲಿ,ಜೂ.27: ಭಾರತದ ಭೂಪ್ರದೇಶವನ್ನು ಯಾರೂ ಅತಿಕ್ರಮಿಸಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ವ್ಯತಿರಿಕ್ತವಾಗಿ ‘ಲಡಾಖ್‌ನಲ್ಲಿ ಚೀನಿ ಪಡೆಗಳು ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯ ತಮ್ಮ ಭಾಗಕ್ಕೆ ಹಿಂದೆ ಸರಿಯುವ ಅಗತ್ಯವಿದೆ’ ಎಂದು ಬೀಜಿಂಗ್‌ನಲ್ಲಿ ಭಾರತೀಯ ರಾಯಭಾರಿಯಾಗಿರುವ ವಿಕ್ರಮ ಮಿಸ್ರಿ ಅವರನ್ನು ಉಲ್ಲೇಖಿಸಿ ಪಿಟಿಐ ಶುಕ್ರವಾರ ಟ್ವೀಟಿಸಿದ್ದ ಬೆನ್ನಿಗೇ ಅದರ ವಿರುದ್ಧ ಕೆಂಡ ಕಾರಿರುವ ಪ್ರಸಾರ ಭಾರತಿಯು, ಸುದ್ದಿಸಂಸ್ಥೆಯನ್ನು ‘ದೇಶವಿರೋಧಿ’ ಎಂದು ಬಣ್ಣಿಸಿದೆಯಲ್ಲದೆ ಅದರೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳುವುದಾಗಿ ಬೆದರಿಕೆಯನ್ನೊಡ್ಡಿದೆ.
24 ಗಂಟೆಗಳ ನಂತರವೂ ಮಿಸ್ರಿಯಾಗಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವಾಗಲಿ ಪಿಟಿಐ ಟ್ವೀಟ್‌ನ ನಿಖರತೆಯನ್ನು ನಿರಾಕರಿಸಿಲ್ಲವಾದರೂ ಗಡಿ ಬಿಕ್ಕಟ್ಟಿನ ಕುರಿತು ಪ್ರಧಾನಿಯವರು ಕಳೆದ ವಾರ ಸರ್ವಪಕ್ಷ ಸಭೆಯಲ್ಲಿ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿರುವುದರಿಂದ ಮಿಸ್ರಿ ಹೇಳಿಕೆಯು ಸರಕಾರಕ್ಕೆ ಮುಜುಗರವನ್ನುಂಟು ಮಾಡಿದೆ.
‘ಚೀನಾ ಗಡಿಯನ್ನು ಅತಿಕ್ರಮಿಸುವ ತನ್ನ ಪರಿಪಾಠವನ್ನು ಮತ್ತು ಎಲ್‌ಎಸಿಯ ಭಾರತದ ಕಡೆಯಲ್ಲಿ ಬಿಡಾರಗಳನ್ನು ನಿರ್ಮಿಸುವುದನ್ನು ನಿಲ್ಲಿಸಬೇಕು ’ ಎಂದು ಮಿಸ್ರಿಯವರನ್ನು ಉಲ್ಲೇಖಿಸಿ ಪಿಟಿಐನ ಎರಡನೇ ಟ್ವೀಟ್ ಕೂಡ ಚೀನಾ ಹಿಂದೆ ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿರಲಿಲ್ಲ ಎಂಬ ಪ್ರಧಾನಿ ಹೇಳಿಕೆಗೆ ವ್ಯತಿರಿಕ್ತವಾಗಿದೆ.
ಶನಿವಾರ ಸಂಜೆಯ ವೇಳೆಗೆ ಪಿಟಿಐ ಬಿಡುಗಡೆಗೊಳಿಸಿದ್ದ ಸಂದರ್ಶನದ ಆವೃತ್ತಿಯಲ್ಲಿ ಮಿಸ್ರಿ ಹೇಳಿಕೆಗಳು ಉಲ್ಲೇಖಿತವಾಗಿರಲಿಲ್ಲ, ಹೀಗಾಗಿ ಪಿಟಿಐ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಡುವೆ ತಾತ್ಕಾಲಿಕ ಒಪ್ಪಂದವೊಂದು ಏರ್ಪಟ್ಟಿರುವಂತೆ ಕಂಡು ಬಂದಿದೆಯಾದರೂ, ಇದಕ್ಕೂ ಮುನ್ನ ಚೀನದ ರಾಯಭಾರಿಯ ಸಂದರ್ಶನಕ್ಕಾಗಿ ಪಿಟಿಐ ಬಗ್ಗೆ ಅಸಮಾಧಾನಗೊಂಡಿರುವ ಸರಕಾರವು ಅದಕ್ಕೆ ಪಾಠ ಕಲಿಸಲು ನಿರ್ಧರಿಸಿರುವಂತಿದೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪ್ರಸಾರ ಭಾರತಿಯ ಅಧಿಕಾರಿಗಳು,ಪಿಟಿಐನ ದೇಶವಿರೋಧಿ ವರದಿಗಾರಿಕೆಯಿಂದಾಗಿ ಅದರೊಂದಿಗಿನ ಸಂಬಂಧಗಳನ್ನು ಮಂದುವರಿಸುವುದು ಸಮರ್ಥನೀಯವಲ್ಲ. ದಶಕಗಳಿಂದಲೂ ಭಾರೀ ಆರ್ಥಿಕ ನೆರವು ನೀಡುವ ಮೂಲಕ ಪ್ರಸಾರ ಭಾರತಿಯು ಪಿಟಿಐ ಅನ್ನು ಬೆಂಬಲಿಸುತ್ತಲೇ ಬಂದಿದೆ. ಆದರೆ ಈಗ ಪಿಟಿಐ ನಡವಳಿಕೆಯ ಹಿನ್ನೆಲೆಯಲ್ಲಿ ಅದರೊಂದಿಗಿನ ತನ್ನ ಸಂಬಂಧಗಳನ್ನು ಪ್ರಸಾರ ಭಾರತಿಯು ಪುನರ್‌ಪರಿಶೀಲಿಸುತ್ತಿದೆ. ಈ ಬಗ್ಗೆ ಅಂತಿಮ ನಿರ್ಧಾರವೊಂದನ್ನು ಶೀಘ್ರವೇ ತಿಳಿಸಲಾಗುವುದು ಎಂದರು.
ಪ್ರಸಾರ ಭಾರತಿಯ ನಿರ್ಧಾರಕ್ಕೆ ಮತ್ತು ದೇಶವಿರೋಧಿ ಆರೋಪಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ‘ಚೀನಾ ವರದಿಗಾರಿಕೆ ’ಎಂದು ಉತ್ತರಿಸಿದ್ದ ಅಧಿಕಾರಿಗಳು ಇದು ಪಿಟಿಐ ಉಭಯ ದೇಶಗಳ ರಾಯಭಾರಿಗಳ ಜೊತೆ ನಡೆಸಿದ್ದ ಸಂದರ್ಶನಗಳಿಗೆ ಸಂಬಂಧಿಸಿದೆಯೇ ಎಂಬ ಇನ್ನೊಂದು ಪ್ರಶ್ನೆಗೆ ‘ಹೌದು ’ಎಂದು ಉತ್ತರಿಸಿದ್ದರು.