ಬೆಂಗಳೂರಿನಲ್ಲಿ ಕೊರೋನ ಸೋಂಕಿತರ ಚಿಕಿತ್ಸೆಗಾಗಿ 10 ಸಾವಿರ ಹಾಸಿಗೆಗಳ ವ್ಯವಸ್ಥೆ: ಸಚಿವ ಸುಧಾಕರ್

Photo: Twitter
ಬೆಂಗಳೂರು, ಜೂ.27: ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯೊಳಗಾಗಿ ಕೊರೋನ ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಕನಿಷ್ಠ ಹತ್ತು ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರು ನಗರದಾದ್ಯಂತ ಚಿಕಿತ್ಸೆಗೆ ಅಗತ್ಯವಿರುವ ಸರಕಾರಿ ಮತ್ತು ಖಾಸಗಿ ಪ್ರದೇಶಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು ಸೋಮವಾರ ಸಂಜೆ ವೇಳೆಗೆ ಖಚಿತ ಮಾಹಿತಿ ಲಭ್ಯವಾಗಲಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿಖರ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಶನಿವಾರ ವಿಡಿಯೋ ಸಂವಾದ ನಡೆಸಿದ ಬಳಿಕ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.
ಸರಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲದೆ, ಬಿಡಿಎ, ವಸತಿ ಇಲಾಖೆ ಮತ್ತು ಖಾಸಗಿ ನಿರ್ಮಾಣ ಸಂಸ್ಥೆಗಳು ನಿರ್ಮಿಸಿರುವ ವಸತಿ ಸಮುಚ್ಚಯಗಳು, ಸರಕಾರಿ ಮತ್ತು ಖಾಸಗಿ ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣಗಳು, ಹಾಸ್ಟೆಲ್ಗಳು ಮತ್ತು ಬೃಹತ್ ವಾಣಿಜ್ಯ ಸಮುಚ್ಛಯಗಳನ್ನು ಕೋವಿಡ್ ಚಿಕಿತ್ಸೆ ಉದ್ದೇಶಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇವುಗಳನ್ನು ಸೌಲಭ್ಯಗಳ ಆಧಾರದ ಮೇಲೆ ಕೋವಿಡ್ ಚಿಕಿತ್ಸಾ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ಗಳಾಗಿ ಪರಿವರ್ತಿಸಲಾಗುವುದು ಎಂದು ಅವರು ತಿಳಿಸಿದರು.
ವೆಂಟಿಲೇಟರ್, ಹೈ ಫ್ಲೊ ಆಕ್ಸಿಜನ್ ಮತ್ತು ಇತರೆ ಅಗತ್ಯ ಸೌಲಭ್ಯಗಳಿರುವ ಕಡೆ ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗುವುದು. ನಗರದಲ್ಲಿ ಕಳೆದ ಒಂದು ವಾರದಿಂದ ಈಚೆಗೆ ಕೊರೋನ ಸೋಂಕಿತರ ಪೈಕಿ ಶೇ.30 ರಿಂದ 50 ರವರೆಗೆ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಸೋಂಕಿತರ ಲಕ್ಷಣ ಆಧರಿಸಿ ಲಘು ಮಧ್ಯಮ ಮತ್ತು ತೀವ್ರ ಸ್ವರೂಪ ಎಂದು ವಿಂಗಡಿಸಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಬಿಟ್ಟುಕೊಡಲು ಸೂಚನೆ ನೀಡಲಾಗಿದೆ. ಮಾಲಕರ ಜತೆ ಸೋಮವಾರ ಮಾತುಕತೆ ನಡೆಸಲಾಗುವುದು. ಅವರಿಗೆ ನಿಗದಿತ ದರ ನೀಡಲಾಗುವುದು. ಆ ಕುರಿತು ಅವರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲಾಗುವುದು. ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳನ್ನು ಬಹುತೇಕ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸುಧಾಕರ್ ಹೇಳಿದರು.
ಕೋವಿಡ್ ಕೇರ್ ಸೆಂಟರ್ ಗಳಿಗೆ ಹೆಚ್ಚಿನ ಸೌಲಭ್ಯ ಅಗತ್ಯವಿಲ್ಲ. ಹೀಗಾಗಿ ಬಿಡಿಎ, ವಸತಿ ಇಲಾಖೆ ನಿರ್ಮಿಸಿ ಸಿದ್ಧಗೊಂಡಿರುವ ಬಹುಮಹಡಿ ವಸತಿ ಸಮುಚ್ಛಯಗಳನ್ನು ಬಳಸಲಾಗುವುದು. ಅದರ ಜತೆ ವಸತಿ ಇಲಾಖೆ, ರೇರಾದಲ್ಲಿ ನೋಂದಣಿಯಾಗಿರುವ ಖಾಸಗಿ ವಲಯದ ಮೂರು ಸಾವಿರ ಪ್ರಾಜೆಕ್ಟ್ ಗಳಲ್ಲಿ ಲಭ್ಯವಾಗುವ ವಸತಿ ಸಮುಚ್ಛಯದ ವಿವರಗಳು ಲಭ್ಯವಾಗಲಿವೆ ಎಂದು ಸುಧಾಕರ್ ತಿಳಿಸಿದರು.
ಇದರ ಜತೆಗೆ ಕ್ರೀಡಾ ಇಲಾಖೆ ಮತ್ತು ಖಾಸಗಿ ಅವರ ಒಡೆತನದಲ್ಲಿರುವ ಕ್ರೀಡಾಂಗಣ, ಕ್ರೀಡಾ ಸಮುಚ್ಛಯಗಳು, ಹಾಸ್ಟೆಲ್ ಗಳು ಮತ್ತು ಬೃಹತ್ ವಾಣಿಜ್ಯ ಸಮುಚ್ಛಯಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. ಒಟ್ಟಾರೆ ಕನಿಷ್ಠ ಹತ್ತು ಸಾವಿರ ಹಾಸಿಗೆಗಳ ಸೌಲಭ್ಯವನ್ನು ಸಿದ್ಧಗೊಳಿಸಲು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11,005 ಇದ್ದರೆ ಗುಣಮುಖರಾಗುತ್ತಿರುವ ಸಂಖ್ಯೆ 6,916ರಷ್ಟಿದೆ. ಸಕ್ರೀಯ ಪ್ರಕರಣಗಳು 3,905 ಇವೆ. ಇದುವರೆಗೆ 180 ಮಂದಿ ಕೋವಿಡ್ ಸಂಬಂಧ ಸಾವಿಗೀಡಾಗಿದ್ದಾರೆ. ರಾಷ್ಟ್ರೀಯ ಮರಣ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ರಾಜ್ಯದ ಮರಣ ಪ್ರಮಾಣ ಶೇ.5ರಷ್ಟು ಕಡಿಮೆಯಿದೆ ಎಂದು ಅವರು ಹೇಳಿದರು.
ಕಳೆದ ಒಂದು ವಾರದಿಂದ ನಗರದಲ್ಲಿ ಸೋಂಕಿತರಾಗುವವರಲ್ಲಿ ಅರ್ಧದಷ್ಟು ಮಂದಿಗೆ ರೋಗ ಲಕ್ಷಣ ಕಾಣಿಸುತ್ತಿದೆ. ಹವಾಮಾನ ಬದಲಾವಣೆ ಇದಕ್ಕೆ ಕಾರಣವಿರಬಹುದು. ರೋಗದಿಂದ ಸಾವಿಗೀಡಾಗುವ ಪ್ರಮಾಣ ಇತರೆ ಸೋಂಕುಗಳಿಗೆ ಹೋಲಿಸಿದರೆ ಕಡಿಮೆ. ಹೀಗಾಗಿ ಜನತೆ ಭಯ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಅವಶ್ಯವಿದೆ ಎಂದು ಸುಧಾಕರ್ ಮನವಿ ಮಾಡಿದರು.
ಕೊರೋನ ಇತರೆ ಸೋಂಕುಗಳಂತೆ ಭಯಪಡುವ ವ್ಯಾದಿ ಅಲ್ಲ. ಸೂಕ್ತ ಚಿಕಿತ್ಸೆ ಮೂಲಕ ರೋಗದ ವಿರುದ್ಧ ಗೆಲುವು ಸಾಧಿಸಬಹುದು. ಹಿರಿಯರಿಗೆ ಸೋಂಕು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆದರೆ ಸುಧಾರಿಸಿಕೊಳ್ಳುತ್ತಾರೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.







