ದ.ಕ. ಜಿಲ್ಲೆಯಲ್ಲಿ 100 ಕಂಟೇನ್‌ಮೆಂಟ್ ಝೋನ್: ಡಿಸಿ ಸಿಂಧೂ ರೂಪೇಶ್

ಮಂಗಳೂರು, ಜೂ. 27: ದ.ಕ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಕಂಟೈನ್‌ಮೆಂಟ್ ಪ್ರದೇಶಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಸೋಂಕಿತರ ಮನೆ ಸೀಲ್‌ಡೌನ್ ಮಾಡುವುದರ ಜತೆಗೆ ಆ ಪ್ರದೇಶವನ್ನು ಕಂಟೈನ್‌ಮೆಂಟ್ ಪ್ರದೇಶವಾಗಿ ಘೋಷಿಸಲಾಗುತ್ತಿದೆ. ಜಿಲ್ಲೆಯಲ್ಲಿ 100 ಕಂಟೇನ್‌ಮೆಂಟ್ ಪ್ರದೇಶಗಳಿವೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಕಂಟೈನ್‌ಮೆಂಟ್ ಪ್ರದೇಶದ ಜನತೆಯು ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿ ಭೇಟಿ ನೀಡುತ್ತಿರುತ್ತಾರೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಎಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೂಡದಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ಹೋಮ್ ಕ್ವಾರಂಟೈನ್‌ನಲ್ಲಿ ಇರುವವರು ಮನೆಯಲ್ಲೂ ಕುಟುಂಬದ ಇತರ ಸದಸ್ಯರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಅಂತಹವರನ್ನು ಕ್ವಾರಂಟೈನ್ ವಾಚ್ ಆ್ಯಪ್‌ನಲ್ಲಿ ನಿಗಾ ವಹಿಸಲಾಗುತ್ತಿದೆ. ನೆರೆಹೊರೆಯವರೂ ಜಿಲ್ಲಾಡಳಿತಕ್ಕೆ ಸಹಕರಿಸುತ್ತಿದ್ದಾರೆ. ಆದಾಗ್ಯೂ, ಹಲವರು ಮಾರ್ಗಸೂಚಿ ಪಾಲಿಸದಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿದ 54 ಮಂದಿ ವಿರುದ್ಧ ಕಠಿಣ ಪ್ರಕರಣ ದಾಖಲಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಕೊವೀಡ್ 19 ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಜೂನ್ ತಿಂಗಳಿಂದ ಜಿಲ್ಲೆಗೆ ಬಂದವರಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ 3,500 ಇದೆ. ಈ ಪೈಕಿ 300 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಎಲ್ಲರನ್ನು ವೆನ್ಲಾಕ್‌ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಬಹುತೇಕ ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಗೆ ಅಂತರ್ ರಾಜ್ಯದಿಂದ ಬಂದವರನ್ನು ಸಾಂಸ್ಥಿಕ ಹಾಗೂ ಹೋಮ್ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಜಿಲ್ಲೆಯಲ್ಲಿ ಐಎಲ್‌ಐ (ಇನ್‌ಫ್ಲೂಯೆಂಜಾ ಲೈಕ್ ಇಲ್‌ನೆಸ್) ಪ್ರಕರಣಗಳು ವ್ಯಾಪಕವಾಗಿ ಕಂಡುಬರುತ್ತಿವೆ. ಜ್ವರ. ಕೆಮ್ಮು, ಶೀತ ಲಕ್ಷಣ ಇದ್ದ ಹೆಚ್ಚಿನವರಲ್ಲಿ ಪಾಸಿಟಿವ್ ಕಂಡು ಬಂದಿದೆ. ಎಸ್‌ಎಆರ್‌ಐ ಪ್ರಕರಣದಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಜಿಲ್ಲೆಯಲ್ಲಿ 576 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದರು.
ಲಾಕ್‌ಡೌನ್ ಪೂರ್ಣಗೊಂಡ ಅನ್‌ಲಾಕ್ ಅವಧಿಯ ನಂತರ ಜನರಲ್ಲಿ ಕೊವೀಡ್ ಬಗ್ಗೆ ನಿರಾಸಕ್ತಿ ಕಂಡುಬರುತ್ತಿದೆ. ಇದರಿಂದ ಎಲ್ಲರಿಗೂ ಅಪಾಯವಿದೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಆದಾಗ್ಯೂ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸಬೇಕು ಎಂದು ಜಿಲ್ಲಾಧೀಕಾರಿ ಸಿಂಧೂ ಬಿ. ರೂಪೇಶ್ ಜನತೆಯಲ್ಲಿ ಮನವಿ ಮಾಡಿದ್ದಾರೆ.







