ಪೊಲೀಸರ ವಿರುದ್ಧ ಪ್ರತಿಭಟಿಸಿ ವಿಷ ಸೇವಿಸಿದ್ದ ವ್ಯಕ್ತಿ ಸಾವು

ಬೆಳಗಾವಿ, ಜೂ.27: ಕೊಲೆ ಪ್ರಕರಣದಲ್ಲಿ ಇಡೀ ಕುಟುಂಬವನ್ನೇ ಬಂಧಿಸಿದ್ದ ಪೊಲೀಸರ ಕ್ರಮ ಖಂಡಿಸಿ ವಿಷ ಸೇವಿಸಿ ಪ್ರತಿಭಟಿಸಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಬೈಲಹೊಂಗಲ ತಾಲೂಕಿನ ಹೊಸಕುರಗುಂದ ಗ್ರಾಮದ ಸಂಜು ನಾಯ್ಕರ್ ಮೃತ ವ್ಯಕ್ತಿ ಎಂದು ಹೇಳಲಾಗುತ್ತಿದೆ.
ಮೃತ ಸಂಜು ಸಹೋದರ ಈರಪ್ಪ ನಾಯ್ಕರ್ ಪತ್ನಿಗೆ, ಗ್ರಾಮದ ದ್ಯಾಮಪ್ಪ ವಣ್ಣೂರ ಎಂಬ ವ್ಯಕ್ತಿ ಕಿರುಕುಳ ನೀಡಿದ್ದಾನೆ. ಇದರಿಂದ ಕೋಪಗೊಂಡು ಎರಡು ದಿನಗಳ ಹಿಂದೆ, ದ್ಯಾಮಪ್ಪ ವಣ್ಣೂರನನ್ನು ಈರಪ್ಪ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿದ್ದ ಎನ್ನಲಾಗಿದೆ.
ಈ ಸಂಬಂಧ ಬೈಲಹೊಂಗಲ ಠಾಣಾ ಪೊಲೀಸರು ಈರಪ್ಪನ ಜೊತೆಗೆ ತಂದೆ ಯಲ್ಲಪ್ಪ, ತಾಯಿ ತಂಗೆವ್ವ, ಸಹೋದರಿ ರೇಣುಕಾರನ್ನು ಬಂಧಿಸಿದ್ದಾರೆ. ಘಟನೆ ನಡೆದಾಗ ತನ್ನ ತಂದೆ-ತಾಯಿ ಜಮೀನಿಗೆ ಹೋಗಿದ್ದರು. ಕೊಲೆ ಪ್ರಕರಣ ಸಂಬಂಧ ಸಹೋದರನ ಜತೆಗೆ ತಂದೆ-ತಾಯಿ, ಸಹೋದರಿಯನ್ನು ಬಂಧಿಸಿದ ಪೊಲೀಸರ ಕ್ರಮ ಸರಿಯಲ್ಲ ಎಂದು ಖಂಡಿಸಿ ಸಂಜು ನಾಯ್ಕರ್ ಶುಕ್ರವಾರ ವಿಷ ಸೇವಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು.
ತಕ್ಷಣವೇ ನಗರ ಪೊಲೀಸರು ಸಂಜುನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಸಂಜು ನಾಯ್ಕರ್ ಶನಿವಾರ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.







