ಉಡುಪಿಯಲ್ಲಿ ಎಸೆಸೆಲ್ಸಿ ಗಣಿತ ಪರೀಕ್ಷೆಗೆ 13081 ಮಂದಿ ಹಾಜರು

ಉಡುಪಿ, ಜೂ.25: ಉಡುಪಿ ಜಿಲ್ಲೆಯಾದ್ಯಂತ ಒಟ್ಟು 51 ಕೇಂದ್ರಗಳಲ್ಲಿ ಇಂದು ನಡೆದ ಎಸೆಸೆಲ್ಸಿ ಗಣಿತ ಪರೀಕ್ಷೆಗೆ ನೋಂದಾಯಿಸಿದ ಒಟ್ಟು 13,884 ವಿದ್ಯಾರ್ಥಿಗ ಪೈಕಿ 13,081 ಮಂದಿ ಹಾಜರಾಗಿದ್ದಾರೆ.
ನೋಂದಾಯಿಸಿದ ವಿದ್ಯಾರ್ಥಿಗಳಲ್ಲಿ ಹೊರ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 586 ಮತ್ತು ಹಾಜರಾತಿ ಇಲ್ಲದೆ ಹಾಲ್ ಟಿಕೆಟ್‌ನಿಂದ ವಂಚಿತರಾದ 95 ಮಂದಿ ಸೇರಿದ್ದಾರೆ. ಇವರನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ ಒಟ್ಟು 120 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗಲು ದಾಖಲಾತಿ ಮಾಡಿಕೊಂಡ ಒಟ್ಟು 484 ಖಾಸಗಿ ವಿದ್ಯಾರ್ಥಿಗಳ ಪೈಕಿ 401 ಮಂದಿ ಪರೀಕ್ಷೆ ಬರೆದು, 83 ಮಂದಿ ಗೈರುಹಾಜ ರಾಗಿದ್ದಾರೆ. ಹೊರ ಜಿಲ್ಲೆಗಳಿಂದ ಬಂದು ನೋಂದಾಯಿಸಿಕೊಂಡ ಎಲ್ಲ 82 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಡುಪಿ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಪ್ರತಿ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.
13 ಮಂದಿಗೆ ಪ್ರತ್ಯೇಕ ಕೋಣೆ
ಕೊರೋನ ಸಂಬಂಧ ಕಂಟೈನ್‌ಮೆಂಟ್ ವಲಯ ಹಾಗೂ ಸೀಲ್‌ಡೌನ್ ಮಾಡಲಾದ ಮನೆಗಳಿಂದ ಪರೀಕ್ಷೆಗೆ ಆಗಮಿಸಿದ ಕಾರ್ಕಳ ವಲಯ- 3, ಕುಂದಾಪುರ- 2, ಬ್ರಹ್ಮಾವರ-1, ಬೈಂದೂರು -3 ಸೇರಿದಂತೆ ಒಟ್ಟು 9 ಮಂದಿ ಯನ್ನು ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಸಲಾಯಿತು. ಇದರಲ್ಲಿ ಮೊದಲ ಪರೀಕ್ಷೆ ಬರೆದ ಆರು ಮಂದಿ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ.
ಮೊದಲ ಪರೀಕ್ಷೆಯ ಸಂದರ್ಭ ಅನಾರೋಗ್ಯ ಕಂಡುಬಂದ ನಾಲ್ಕು ವಿದ್ಯಾರ್ಥಿಗಳಿಗೆ ಇಂದು ಕೂಡ ಪ್ರತ್ಯೇಕ ಕೋಣೆಯ ವ್ಯವಸ್ಥೆ ಮಾಡಲಾ ಯಿತು. ಬ್ರಹ್ಮಾವರ ವಲಯ ವ್ಯಾಪ್ತಿಯ ಪರೀಕ್ಷಾ ಕೇಂದ್ರ ಒಂದರಲ್ಲಿ ಅನಾರೋಗ್ಯ ಪೀಡಿತ ಮತ್ತು ಕಂಟೈನ್‌ಮೆಂಟ್ ವಲಯಗಳಿಂದ ಬಂದ ವಿದ್ಯಾರ್ಥಿಗಳಿದ್ದು, ಇವರು ಪ್ರತ್ಯೇಕ ಪ್ರತ್ಯೇಕ ಕೋಣೆಯಲ್ಲಿ ಕುಳಿತು ಪರೀಕ್ಷೆ ಬರೆದರು.
ಯಾವುದೇ ವ್ಯವಸ್ಥೆಗಳಿಲ್ಲದ ವಿದ್ಯಾರ್ಥಿಗಳನ್ನು ಇಂದು ಕೂಡ ಇಲಾಖೆ ವ್ಯವಸ್ಥೆ ಗೊಳಿಸಲಾದ 82 ಬಸ್‌ಗಳಲ್ಲಿ ಕೇಂದ್ರಗಳಿಗೆ ಕರೆದುಕೊಂಡು ಬರಲಾಯಿತು. ಮಲ್ಪೆಯ ನಗರಸಭೆ ಸದಸ್ಯರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆಯನ್ನು ಮಾಡಿದರು. ಕಾರ್ಕಳ ದಲ್ಲಿ ಹೋಮ್ ಕ್ವಾರಂಟೇನ್‌ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಚಾಲಕರೊಬ್ಬರು ತಮ್ಮ ರಿಕ್ಷಾದಲ್ಲಿ ಉಚಿತವಾಗಿ ಕೇಂದ್ರಕ್ಕೆ ಕರೆದುಕೊಂಡು ಬರುವ ಕೆಲಸ ಮಾಡಿದರು.
‘ಕೊರೋನ ಭೀತಿಯ ಮಧ್ಯೆ ನಡೆದ ಎರಡನೆ ಪರೀಕ್ಷೆಯಲ್ಲಿಯೇ ವಿದ್ಯಾರ್ಥಿ ಗಳು ಎಲ್ಲ ರೀತಿಯ ಪ್ರಕ್ರಿಯೆಗಳಿಗೆ ಹೊಂದಿಕೊಂಡಿದ್ದಾರೆ. ಅವರೇ ಸುರಕ್ಷಿತ ಅಂತರವನ್ನು ಕಾಪಾಡಿ, ಸರತಿ ಸಾಲಿನಲ್ಲಿ ಬಂದು, ಸ್ಯಾನಿಟೈಸರ್ ಬಳಸಿದರು. ಅಲ್ಲದೆ ಸ್ಕ್ರೀನಿಂಗ್ ಸೇರಿದಂತೆ ಎಲ್ಲ ನಿಯಮಾವಳಿ ಗಳನ್ನು ಚಾಚು ತಪ್ಪದೆ ಪಾಲಿಸಿರುವುದು ಕಂಡುಬಂತು. ಎಲ್ಲೂ ಯಾವುದೇ ಸಮಸ್ಯೆಯಾಲಿ, ಗೊಂದಲಗಳಾಗಲಿ ಕಂಡುಬಂದಿಲ್ಲ’ -ಶೇಷಶಯನ ಕಾರಿಂಜ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ.
ಎಸೆಸೆಲ್ಸಿ ವಿದ್ಯಾರ್ಥಿಯ ಮನೆಯವರಿಗೆ ಪಾಸಿಟಿವ್!
ಜಿಲ್ಲೆಯ ಎಸೆಸೆಲ್ಸಿ ವಿದ್ಯಾರ್ಥಿನಿಯೊಬ್ಬಳ ಮನೆಯವರಿಗೆ ಕೊರೋನ ಪಾಸಿ ಟಿವ್ ಬಂದಿರುವ ಬಗ್ಗೆ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಆಕೆಯನ್ನು ಇಂದು ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ.
ಇಂದು ಸಂಜೆ ವಿದ್ಯಾರ್ಥಿನಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಜೂ.29ರ ವಿಜ್ಞಾನ ಪರೀಕ್ಷೆಗೆ ಮೊದಲು ಈ ವರದಿ ಬಾರದಿದ್ದರೆ ಆಕೆ, ಬರೆಯುವ ಅವಕಾಶ ವಂಚಿತಳಾಗುವ ಸಾಧ್ಯತೆ ಗಳಿವೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಆಕೆಯ ವರದಿ ನೆಗೆಟಿವ್ ಬಂದರೆ, ಪ್ರತ್ಯೇಕವಾಗಿ ಖಾಸಗಿ ವಾಹನದಲ್ಲಿ ಕೇಂದ್ರಕ್ಕೆ ಬಂದು, ಪ್ರತ್ಯೇಕ ಕೋಣೆಯಲ್ಲಿ ಕುಳಿತು ಪರೀಕ್ಷೆ ಬರೆಯ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







