'ಕೋವಿಡ್' ನಿಯಂತ್ರಣ: ಉಸ್ತುವಾರಿಗಾಗಿ ಸಚಿವರ ನಡುವೆ ಮುಸುಕಿನ ಗುದ್ದಾಟ

ಬೆಂಗಳೂರು, ಜೂ. 27: ಮಾರಕ ಕೊರೋನ ಸೋಂಕು ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಏರುತ್ತಿದೆ. ಸೋಂಕಿನ ನಿಯಂತ್ರಣಕ್ಕಾಗಿ 'ಸಮನ್ವಯತೆ'ಯಿಂದ ಕೆಲಸ ಮಾಡಬೇಕಾದ ಸಚಿವರು ಬೆಂಗಳೂರು ನಗರದ 'ಕೋವಿಡ್-19 ಉಸ್ತುವಾರಿ'ಗೆ ಮುಸುಕಿನ ಗುದ್ದಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದ್ದು, ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬೆಂಗಳೂರು ನಗರದ ಕೋವಿಡ್-19 ನಿರ್ವಹಣಾ ಉಸ್ತುವಾರಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಕಂದಾಯ ಸಚಿವ ಆರ್.ಅಶೋಕ್‍ಗೆ ನೀಡಿರುವುದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಗೊತ್ತಾಗಿದೆ.
ಕೋವಿಡ್-19 ನಿರ್ವಹಣೆ ಹೊಣೆಗಾರಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ವಹಿಸಲಾಗಿತ್ತು. ಆದರೆ, ಅವರಿಗೆ ಎಸೆಸೆಲ್ಸಿ ಪರೀಕ್ಷೆ ಜವಾಬ್ದಾರಿ ಹಿನ್ನೆಲೆಯಲ್ಲಿ ಅದನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ನಿಭಾಯಿಸುತ್ತಿದ್ದರು. ಈ ಮಧ್ಯೆ ಡಾ.ಸುಧಾಕರ್ ಅವರ ಪತ್ನಿ, ಪುತ್ರಿ ಹಾಗೂ ಅವರ ತಂದೆಗೆ ಕೊರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಧಾಕರ್ ಅವರು ಹೋಮ್ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.
ಆದುದರಿಂದ ಕೊರೋನ ಸೋಂಕಿನ ನಿರ್ವಹಣೆ ಹೊಣೆಯನ್ನು ಆರ್.ಅಶೋಕ್ ಅವರ ಹೆಗಲಿಗೆ ವಹಿಸಿರುವುದು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ. ಕೋವಿಡ್-19 ನಿರ್ವಹಣೆಗೆ ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿ ಹೊತ್ತಿರುವ ನಮ್ಮನ್ನು ಸೌಜನ್ಯಕ್ಕೂ ಒಂದು ಮಾತು ಕೇಳದೆ ಏಕಾಏಕಿ ಸೋಂಕು ನಿರ್ವಹಣೆ ಹೊಣೆಯನ್ನು ಅಶೋಕ್ ಅವರಿಗೆ ನೀಡಿದ್ದು ಸರಿಯಲ್ಲ ಎಂದು ಮೂವರು ಮುನಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಪ್ರತಿನಿತ್ಯದ ಕೋವಿಡ್-19 ಸ್ಥಿತಿಗತಿ, ಸೋಂಕಿತರ ಸಂಖ್ಯೆಯಲ್ಲಿನ ಏರಿಕೆ, ಸಾವು-ನೋವು, ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಸಾಮಾನ್ಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಅಥವಾ ವೈದ್ಯಕೀಯ ಶಿಕ್ಷಣ ಸಚಿವರು ಮಾಹಿತಿ ನೀಡುತ್ತಿದ್ದರು. ಆದರೆ, ರಾಜ್ಯದಲ್ಲಿ ಕೆಲ ದಿನಗಳಿಂದ ಯಾರೊಬ್ಬರೂ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಾಗಿ ಸೋಂಕು ನಿಯಂತ್ರಣದಂತಹ ಗಂಭೀರ ವಿಚಾರದಲ್ಲಿ ಸಾರ್ವಜನಿಕರಲ್ಲಿ ಗೊಂದಲಗಳು ಸೃಷ್ಟಿಯಾಗಿವೆ.
ನನಗೇನು ಅಸಮಾಧಾನವಿಲ್ಲ
ಬೆಂಗಳೂರು ನಗರದಲ್ಲಿ ಕೋವಿಡ್-19 ನಿಯಂತ್ರಿಸುವ ಉಸ್ತುವಾರಿಯನ್ನು ಕಂದಾಯ ಸಚಿವ ಆರ್.ಅಶೋಕ್‍ಗೆ ವಹಿಸಿರುವುದಕ್ಕೆ ನನಗೇನು ಅಸಮಾಧಾನವಿಲ್ಲ. ಈ ಬಗ್ಗೆ ನಾನು ಯಾರೊಬ್ಬರ ಬಳಿಯೂ ಹೇಳಿಕೊಂಡಿಲ್ಲ. ನಾನು ರಾಜ್ಯದ 30 ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿ, ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ್ದೇನೆ. ಅಶೋಕ್ ಬೆಂಗಳೂರಿನಲ್ಲಿ ಲಭ್ಯವಿರುತ್ತಾರೆಂಬ ಕಾರಣಕ್ಕೆ ಉಸ್ತುವಾರಿ ನೀಡಲಾಗಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ'
-ಬಿ.ಶ್ರೀರಾಮುಲು, ಆರೋಗ್ಯ ಸಚಿವ







