ರಾಜ್ಯ ವೈದ್ಯ ಪ್ರಶಸ್ತಿಗೆ ಡಾ.ಎಂ.ಅಣ್ಣಯ್ಯ ಆಯ್ಕೆ

ಮಂಗಳೂರು, ಜೂ.27: ವೈದ್ಯರ ದಿನಾಚರಣೆಯ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕ ಬೆಂಗಳೂರು ವತಿಯಿಂದ ನೀಡುವ ಶ್ರೇಷ್ಠ ಸಮಾಜಮುಖಿ ರಾಜ್ಯ ವೈದ್ಯ ಪ್ರಶಸ್ತಿಗೆ (ಡಾ.ಬಿ.ಸಿ.ರಾಯ್ ಸ್ಮರಣಾರ್ಥ) ಐಎಂಎ ಮಂಗಳೂರು ಅಧ್ಯಕ್ಷ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಆಯ್ಕೆಯಾಗಿದ್ದಾರೆ.
ನಾಡಿನ ಖ್ಯಾತ ಶಿಕ್ಷಣ ಸಂಸ್ಥೆಯಾದ ಶ್ರೀನಿವಾಸ ಯೂನಿವರ್ಸಿಟಿಯ ಮುಖ್ಯ ವೈದ್ಯಾಧಿಕಾರಿ ಹಾಗೂ ಪ್ರಾಧ್ಯಾಪಕರಾಗಿ ಕಳೆದ ಎರಡು ದಶಕ ಗಳಿಂದ ಸೇವೆ ಸಲ್ಲಿಸುತ್ತಿರುವ ಡಾ.ಅಣ್ಣಯ್ಯ ಕುಲಾಲ್ ಅಷ್ಟೇ ವರ್ಷಗಳಿಂದ ಕುಟುಂಬ ವೈದ್ಯ ಮತ್ತು ಅರೋಗ್ಯ ಸಲಹಾ ತಜ್ಞರಾಗಿ ಮಂಗಳೂರಿನ ಕುಲಾಲ್ ಹೆಲ್ತ್ ಸೆಂಟರ್ ಮೂಲಕ ಸಮಾಜಮುಖಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.
ಹಳ್ಳಿಗಳಲ್ಲಿ ವೈದ್ಯಕೀಯ ಸೇವೆ, ವೈದ್ಯಕೀಯ ಶಿಕ್ಷಣ, ವೈದ್ಯಕೀಯ ಸಂಘಟನೆ, ವೈದ್ಯಕೀಯ ಸಾಹಿತ್ಯ, ಕನ್ನಡ ನಾಡು, ನುಡಿ, ನೆಲ, ಜಲ, ಪರಿಸರ, ಕೆರೆ-ರಸ್ತೆ, ರೈಲ್ವೆ ಮುಂತಾದ ಹೋರಾಟಗಳಲ್ಲಿ ಕರಾವಳಿ ಭಾಗದಲ್ಲಿ ಮುಂಚೂಣಿಯ ನಾಯಕತ್ವ ನೀಡಿದವರು.
ಎರಡು ದಶಕಗಳಿಂದ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್, ಕನ್ನಡಕಟ್ಟೆಗಳ ಮೂಲಕ ಅರೋಗ್ಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಜನಜಾಗೃತಿ ನೀಡಿ ಜನಮನದಲ್ಲಿ ಹೆಸರಾದವರು. ಐಎಂಎ ಬರಹಗಾರರ ಬಳಗವನ್ನ ಹುಟ್ಟುಹಾಕಿ ಪ್ರಪ್ರಥಮ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನವನ್ನು ಮಂಗಳೂರಲ್ಲಿ ಯಶಸ್ವಿಯಾಗಿ ಸಂಘಟಿಸಿದವರು ಡಾ.ಅಣ್ಣಯ್ಯ ಕುಲಾಲ್.
ಐಎಂಎಯ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಇವರು, ಹತ್ತಾರು ವೈದ್ಯ ಸಮ್ಮೇಳನಗಳ ಯಶಸ್ಸಿಗೆ ದುಡಿದವರು. ಪ್ರಸ್ತುತ ಮಂಗಳೂರು ಐಎಂಎಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಅತೀ ಕಿರಿಯ ವಯಸ್ಸಿನ ವೈದ್ಯರು ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.
ಭಾರತೀಯ ಜನತಾಪಕ್ಷದ ವೈದ್ಯಕೀಯ ಪ್ರಕೋಷ್ಠ ಮತ್ತು ಶಿಕ್ಷಕ ಶಿಕ್ಷಣ ಪ್ರಕೋಷ್ಠಗಳಲ್ಲಿ ಜಿಲ್ಲೆ ಮತ್ತು ರಾಜ್ಯ ಸಂಚಾಲಕನಾಗಿ ಸಂಘಟನಾತ್ಮಕ ವಾಗಿ ತೊಡಗಿಸಿಕೊಂಡಿರುವ ಇವರು, ತನ್ನ ಸಮಾಜಮುಖಿ ವೈದ್ಯಕೀಯ ಸೇವೆಯ ಜೊತೆಗೆ ಬರಹ, ಭಾಷಣ ಮತ್ತು ಸಂಘಟನಾಚಾ ತುರ್ಯದಿಂದ ಜನಮನ ಗೆದ್ದು, ಸಮಾಜದ ಪ್ರೀತಿ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.







