ಆಸ್ಪತ್ರೆಗೆ ಭೇಟಿ ನೀಡಿದ ಪ್ರತಾಪ್ ಸಿಂಹರನ್ನು ತರಾಟೆಗೆ ತೆಗೆದು ಬಿಜೆಪಿ ಸ್ಥಳೀಯ ಜನಪ್ರತಿನಿಧಿಗಳು

ಮೈಸೂರು,ಜೂ.27: ಮೈಸೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪರಿಶೀಲನೆಗೆ ಬಂದಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನು ಅವರ ಬಿಜೆಪಿ ಪಕ್ಷದ ಸ್ಥಳೀಯ ಜನಪ್ರತಿನಿಧಿಗಳೇ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ನಗರದ ನಂಜುಮಳಿಗೆ ರಸ್ತೆಯಲ್ಲಿರುವ ತುಳಸಿದಾಸ್ ತಾಯಿ ಮಕ್ಕಳ ಆಸ್ಪತ್ರೆ ಪರಿಶೀಲನೆಗೆ ಶನಿವಾರ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರನ್ನು ಸುತ್ತುವರಿದ ಸ್ಥಳೀಯ ಜನಪ್ರತಿನಿಧಿಗಳು ನೀವೇ ಆಸ್ಪತ್ರೆಗೆ ಭೇಟಿ ಮಾಡಿದರೆ ಹೇಗೆ. ನಮಗೆಲ್ಲ ಮಾಹಿತಿ ಕೊಡೋರು ಯಾರು ? ಕಾರ್ಪೋರೇಟರ್ ಹಾಗೂ ಶಾಸಕರ ಗಮನಕ್ಕೆ ಬಾರದೇ ನೀವೇಗೆ ವಿಸಿಟ್ ಮಾಡುತ್ತೀರ? ಎಂದು ಸ್ಥಳೀಯ ಕಾರ್ಪೋರೇಟರ್ ಹಾಗೂ ಆಸ್ಪತ್ರೆಯ ಸುರಕ್ಷಾ ಕಮಿಟಿ ಸದಸ್ಯರು ಸಂಸದ ಪ್ರತಾಪ್ ಸಿಂಹಗೆ ಪ್ರಶ್ನಿಸಿದ್ದಾರೆ.
ಸ್ಥಳಿಯ ಶಾಸಕರನ್ನು ಕರೆದಿಲ್ಲ, ಜತೆಗೆ ಕಾರ್ಪೋರೇಟರ್ ಹಾಗೂ ಶಾಸಕರ ಗಮನಕ್ಕೆ ತರದೆ ಹೇಗೆ ಭೇಟಿ ನೀಡಿದ್ದೀರಿ. ನಾವೆಲ್ಲಾ ಯಾಕೆ ಇದ್ದೀವೆ ? ಎಂದು ಸಂಸದ ಪ್ರತಾಪ್ ಸಿಂಹರಿಗೆ ಸ್ಥಳೀಯ ಜನಪ್ರತಿನಿಧಿಗಳು ಪ್ರಶ್ನೆಗಳ ಸುರಿಮಳೆಗೈದರು.
ಈ ವೇಳೆ ಸಂಸದ ಪ್ರತಾಪ್ ಸಿಂಹ, ಮಾಹಿತಿ ನೀಡುವುದರಲ್ಲಿ ಗೊಂದಲ ಉಂಟಾಗಿದೆ. ಕೇಂದ್ರ ಸರ್ಕಾರ ಅನುದಾನದಲ್ಲೂ ಆಸ್ಪತ್ರೆ ನಿರ್ಮಾಣವಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.





