ಕೋವಿಡ್-19 ಚಿಕಿತ್ಸೆಗೆ 2.26 ಲಕ್ಷ ಕೋಟಿ ರೂಪಾಯಿ ಅಗತ್ಯ: ವಿಶ್ವ ಆರೋಗ್ಯ ಸಂಸ್ಥೆ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜೂ. 27: ಕೋವಿಡ್-19 ಪರೀಕ್ಷಾ ವಿಧಾನಗಳು, ಅದರ ಲಸಿಕೆಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸುವ ಹಾಗೂ ಉತ್ಪಾದಿಸುವ ಜಾಗತಿಕ ಪ್ರಯತ್ನಗಳಿಗೆ ಇನ್ನೊಂದು ವರ್ಷದ ಅವಧಿಯಲ್ಲಿ 30 ಬಿಲಿಯ ಡಾಲರ್ (ಸುಮಾರು 2.26 ಲಕ್ಷ ಕೋಟಿ ರೂಪಾಯಿ)ಗಿಂತಲೂ ಅಧಿಕ ಹಣದ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.
ಸಾಂಕ್ರಾಮಿಕವನ್ನು ಜಯಿಸುವುದಕ್ಕಾಗಿ ಅಂತರ್‌ರಾಷ್ಟ್ರೀಯ ಸಂಪನ್ಮೂಲವನ್ನು ಒಟ್ಟುಗೂಡಿಸುವುದಕ್ಕಾಗಿ ಎಪ್ರಿಲ್‌ನಲ್ಲಿ ಆರಂಭಿಸಲಾದ ಜಾಗತಿಕ ಯೋಜನೆಯ ವಿವರಗಳನ್ನು ನೀಡಿದ ವಿಶ್ವ ಆರೋಗ್ಯ ಸಂಸ್ಥೆಯು, ಯೋಜನೆಯ ಜಾರಿಗೆ 31.3 ಬಿಲಿಯ ಡಾಲರ್ (ಸುಮಾರು 2.36 ಲಕ್ಷ ಕೋಟಿ ರೂಪಾಯಿ) ಹಣದ ಅವಶ್ಯಕತೆಯಿದೆ ಎಂದಿದೆ.
ಈವರೆಗೆ, ಈ ಪೈಕಿ 3.4 ಬಿಲಿಯ ಡಾಲರ್ (ಸುಮಾರು 25,700 ಕೋಟಿ ರೂಪಾಯಿ) ನೀಡುವ ವಾಗ್ದಾನಗಳು ಬಂದಿವೆ ಎಂದು ಹೇಳಿರುವ ಅದು, ಉಳಿದ 27.9 ಬಿಲಿಯ ಡಾಲರ್ ಮುಂದಿನ 12 ತಿಂಗಳಲ್ಲಿ ಸಂಗ್ರಹವಾಗಬೇಕಾಗಿದೆ ಎಂದಿದೆ.
‘‘ಇದು ಯೋಗ್ಯ ಹೂಡಿಕೆಯಾಗಿದೆ’’ ಎಂದು ಈ ಯೋಜನೆಯ ವಿಶೇಷ ರಾಯಭಾರಿ ನಗೋಝಿ ಒಕೊಂಜೊ-ಇವೀಲಾ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘‘ಈಗ ನಾವು ಇದರ ಹಿಂದೆ ಹೋಗದಿದ್ದರೆ, ಮಾನವ ನಷ್ಟಗಳು ಮತ್ತು ಆರ್ಥಿಕ ಹೊಡೆತಗಳು ಹೆಚ್ಚಲಿವೆ’’ ಎಂದು ಆಕೆ ಅಭಿಪ್ರಾಯಪಟ್ಟರು.







