ಬಂಧನ ಕೇಂದ್ರಗಳಿಂದ ವಲಸಿಗ ಮಕ್ಕಳನ್ನು ಬಿಡುಗಡೆ ಮಾಡಿ: ಅಮೆರಿಕ ನ್ಯಾಯಾಲಯ ಆದೇಶ
ಲಾಸ್ ಏಂಜಲಿಸ್ (ಅಮೆರಿಕ), ಜೂ. 27: ಅಮೆರಿಕದ ಕುಟುಂಬ ವಲಸೆ ಬಂಧನ ಕೇಂದ್ರಗಳಲ್ಲಿ ಬಂಧನದಲ್ಲಿರುವ 100ಕ್ಕೂ ಅಧಿಕ ಮಕ್ಕಳನ್ನು ಬಿಡುಗಡೆಗೊಳಿಸುವಂತೆ ಲಾಸ್ ಏಂಜಲಿಸ್ ನಗರದ ನ್ಯಾಯಾಲಯವೊಂದು ಶುಕ್ರವಾರ ಆದೇಶ ನೀಡಿದೆ. ಈ ಬಂಧನ ಕೇಂದ್ರಗಳಲ್ಲಿ ಮಕ್ಕಳು ಕೊರೋನ ವೈರಸ್ ಸೋಂಕಿಗೆ ಈಡಾಗಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಅದು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ದೇಶದಲ್ಲಿರುವ ಮೂರು ಕುಟುಂಬ ಬಂಧನ ಕೇಂದ್ರಗಳ ಪೈಕಿ ಎರಡರಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ವರದಿಯಾಗಿದೆ ಎಂದು ಜಿಲ್ಲಾ ನ್ಯಾಯಾಧೀಶೆ ಡಾಲಿ ಗೀ ತನ್ನ ತೀರ್ಪಿನಲ್ಲಿ ತಿಳಿಸಿದರು.
ಈ ಬಂಧನ ಕೇಂದ್ರಗಳಲ್ಲಿರುವ ಕೈದಿಗಳ ಸಂಖ್ಯೆಯನ್ನು ತಗ್ಗಿಸಲು ಇಮಿಗ್ರೇಶನ್ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಮಟ್ (ಐಸಿಇ) ಸಂಸ್ಥೆಯು ಪ್ರಯತ್ನಗಳನ್ನು ನಡೆಸಿರುವ ಹೊರತಾಗಿಯೂ, ಈ ಬಂಧನ ಕೇಂದ್ರಗಳಲ್ಲಿ ಬೃಹತ್ ಆರೋಗ್ಯ ಬಿಕ್ಕಟ್ಟೊಂದು ಉದ್ಭವಿಸುವ ಸಾಧ್ಯತೆಗಳು ಇಲ್ಲದಿಲ್ಲ ಎಂದು ನ್ಯಾಯಾಧೀಶೆ ಅಭಿಪ್ರಾಯಪಟ್ಟರು.
ಅಲ್ಲಿರುವ 124 ಮಕ್ಕಳನ್ನು ಜುಲೈ 17ರ ವೇಳೆಗೆ ಅವರ ಹೆತ್ತವರೊಂದಿಗೆ ಬಿಡುಗಡೆ ಮಾಡಬೇಕು ಅಥವಾ ಹೆತ್ತವರ ಸಮ್ಮತಿಯೊಂದಿಗೆ ಅವರನ್ನು ಸೂಕ್ತ ಪೋಷಕರ ವಶಕ್ಕೆ ಹಸ್ತಾಂತರಿಸಬೇಕು ಎಂದು ನ್ಯಾಯಾಧೀಶರು ಹೇಳಿದರು.
ಇಮಿಗ್ರೇಶನ್ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಮಟ್ ಸಂಸ್ಥೆಯ ವಶದಲ್ಲಿರುವ 2,500ಕ್ಕೂ ಹೆಚ್ಚು ಮಂದಿ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಸಿಎನ್‌ಎನ್ ಸುದ್ದಿವಾಹಿನಿ ವರದಿ ಮಾಡಿದೆ.







