ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಾಚರಣೆ: ಹೈಕೋರ್ಟ್ ನಿಯಮಗಳಿಗೆ ಒಪ್ಪಿಗೆ ನೀಡಿ ಅಧಿಸೂಚನೆ ಹೊರಡಿಸಿದ ಸರಕಾರ

ಬೆಂಗಳೂರು, ಜೂ.2: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸ್ ಮೂಲಕವೇ ಕಾರ್ಯ ನಿರ್ವಹಿಸಲು ನಿರ್ದೇಶಿಸಿದ್ದ ಹೈಕೋರ್ಟ್, ಇದೀಗ ಈ ಕುರಿತಂತೆ ಕಾನೂನು ರೂಪಿಸಿದೆ.
225ರಡಿ ದತ್ತವಾದ ಅಧಿಕಾರ ಬಳಸಿ ಕೋರ್ಟ್ ಪ್ರಕ್ರಿಯೆಗಳಿಗೆ ನಿಯಮ ರೂಪಿಸಿರುವ ಹೈಕೋರ್ಟ್, ವಿಧಿ 227ರ ಅಡಿ ಲಭ್ಯವಿರುವ ಕಾರ್ಯಾಚರಿಸಲು ನಿರ್ದೇಶಿಸಿದೆ. ರಾಜ್ಯ ಸರಕಾರ ನಿಯಮಗಳಿಗೆ ಒಪ್ಪಿಗೆ ನೀಡಿ ಜೂ.25ರಂದು ಅಧಿಸೂಚನೆ ಹೊರಡಿಸಿದ್ದು, ಅಧಿಕೃತವಾಗಿ ಜಾರಿಯಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲು ಇಂಟರ್ನೆಟ್ ಸಮಸ್ಯೆ ಇರುವ ಹಳ್ಳಿಗಾಡು ಪ್ರದೇಶಗಳಿಗೆ ಅನುಕೂಲವಾಗುವಂತೆ ಹತ್ತಿರದ ಕೋರ್ಟ್ ನಲ್ಲಿ ಡೆಸ್ಕ್ ಟಾಪ್, ಲ್ಯಾಪ್ ಟಾಪ್, ಮೊಬೈಲ್, ಪ್ರಿಂಟರ್, ವಿದ್ಯುತ್ ಸಂಪರ್ಕ, ಕ್ಯಾಮೆರಾ, ಮೈಕ್ರೋಫೋನ್, ಸ್ಪೀಕರ್, ಡಾಕ್ಯೂಮೆಂಟ್ ವಿಷುಯಲೈಸರ್, ಆಸನ ವ್ಯವಸ್ಥೆ, ಸೂಕ್ತ ಬೆಳಕಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಬೇಕು. ಕೋರ್ಟ್ ಪ್ರಕ್ರಿಯೆಯಲ್ಲಿ ಇವುಗಳನ್ನು ಬಳಸಲು ಕೋಆರ್ಡಿನೇಟರ್ ಇರಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಹಳ್ಳಿಗಾಡು ಪ್ರದೇಶದಲ್ಲಿ ಅಗತ್ಯವಿದ್ದ ಕಡೆ ಸಾಕ್ಷ್ಯ ವಿಚಾರಣೆ ಮತ್ತಿತರ ಪ್ರಕ್ರಿಯೆ ನಡೆಸಲು ಕೋಆರ್ಡಿನೇಟರ್ ಭಾಷಾಂತರಕಾರರನ್ನು ನೇಮಿಸಿಕೊಡಬೇಕು. ಸಮನ್ಸ್ ನೀಡುವ ಸಂದರ್ಭದಲ್ಲಿ ವಿಚಾರಣಾ ದಿನಾಂಕ, ಸ್ಥಳಗಳನ್ನು ನಿಗದಿಪಡಿಸುವ ವೇಳೆ ಫೋಟೊ ಐಡಿ ತರುವಂತೆ ಸೂಚಿಸಬೇಕು. ಡಾಕ್ಯೂಮೆಂಟ್ ವಿಷುಯಲೈಸರ್ ಗಳನ್ನು ಸೂಕ್ತವಾಗಿ ಅಳವಡಿಸಬೇಕು. ಇಂತಹ ಸೌಲಭ್ಯ ಪಡೆದುಕೊಳ್ಳುವ ಕಕ್ಷೀದಾರರು ಅದಕ್ಕೆ ಕೋರ್ಟ್ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು. ನ್ಯಾಯಾಂಗ ಬಂಧನ, ದೋಷಾರೋಪ ಸಿದ್ದ ಮಾಡುವುದು, ಸಾಕ್ಷ್ಯ ವಿಚಾರಣೆ ನಡೆಸುವುದು, ಹೇಳಿಕೆಗಳನ್ನು ದಾಖಲಿಸುವ ಪ್ರಕ್ರಿಯೆಗಳನ್ನು ಕೋರ್ಟ್ ಗಳು ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಸಬಹುದು.
ಓಪನ್ ಕೋರ್ಟ್‍ಗಳಲ್ಲಿ ವೀಕ್ಷಕರು ಕೋರ್ಟ್ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶವಿರುವಂತೆಯೇ ಕೋರ್ಟ್ ಗಳು ಸಾರ್ವಜನಿಕರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಕೋರ್ಟ್ ಕಲಾಪ ವೀಕ್ಷಿಸಲು ಅವಕಾಶ ಮಾಡಿಕೊಡಬೇಕು ಎಂದು ಹೊಸ ನಿಯಮಗಳಲ್ಲಿ ತಿಳಿಸಲಾಗಿದೆ.







