ಬಿಎಂಟಿಸಿ ನೌಕರರನ್ನು ಕೊರೋನ ಸೈನಿಕರೆಂದು ಘೋಷಿಸಿ: ಎನ್.ಎ.ಹಾರೀಸ್
ಬೆಂಗಳೂರು, ಜೂ.27: ಕೋವಿಡ್-19 ಸಂದರ್ಭದಲ್ಲಿ ಅವಿಸ್ಮರಣಿಯ ಸೇವೆ ಸಲ್ಲಿಸುತ್ತಿರುವ ಬಿಎಂಟಿಸಿ ನೌಕರರನ್ನು ಕೊರೋನ ಸೈನಿಕರೆಂದು ಎಂದು ಪರಿಗಣಿಸಿ, ವಿಶೇಷ ಪರಿಹಾರ ಧನ ಘೋಷಿಸಬೇಕೆಂದು ಬಿಎಂಟಿಸಿ ಮಾಜಿ ಅಧ್ಯಕ್ಷ, ಶಾಸಕ ಎನ್.ಎ.ಹಾರೀಸ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಕೊರೋನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು, ಆರೋಗ್ಯ ಹಾಗೂ ಪಾಲಿಕೆ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ, ಬೆಂಗಳೂರು ಸಾರಿಗೆಯ ಜೀವನಾಡಿ ಆಗಿರುವ ಬಿಎಂಟಿಸಿ ನೌಕರರು, ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೇವೆಗೆ ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರ ಅವರನ್ನು ಶ್ಲಾಘಿಸಿ, ಕೋವಿಡ್-19ನಿಂದ ಮೃತರಾದರೆ ವಿಶೇಷ ಪರಿಹಾರ ನೀಡುವುದಾಗಿ ಘೋಷಿಸಬೇಕು ಎಂದು ಮನವಿ ಮಾಡಿದರು.
ಬಿಎಂಟಿಸಿಯಲ್ಲಿ ಈಗಾಗಲೇ 22 ಕೋವಿಡ್-19 ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಪೈಕಿ 17 ಪ್ರಕರಣ ಸಕ್ರಿಯವಾಗಿದ್ದರೆ, 5 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎನ್ನುವ ಮಾಹಿತಿ ಇದೆ ಎಂದ ಅವರು, ಈ ಸಂಸ್ಥೆಯ ನೌಕರರಿಗೆ ಸೂಕ್ತ ಸೌಲಭ್ಯ ಒದಗಿಸುವ ಜೊತೆಗೆ ಆತ್ಮಸ್ಥೈರ್ಯ ತುಂಬಲು ರಾಜ್ಯ ಸರಕಾರ ಮುಂದಾಗಲಿ ಎಂದರು.
ಲಾಕ್‍ಡೌನ್ ಮಾಡಿ: ಕೊರೋನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇದನ್ನು ತಡೆಗಟ್ಟಲು ಸುರಕ್ಷಿತ ಅಂತರ ಬಹುಮುಖ್ಯವಾಗಿದೆ. ಹೀಗಾಗಿ, ರಾಜ್ಯ ಸರಕಾರ ಈ ಕೂಡಲೇ ಲಾಕ್‍ಡೌನ್ ಪ್ರಕ್ರಿಯೆಗೆ ಮುಂದಾಗಬೇಕು. ಜೊತೆಗೆ, ವಿಧಾನಸಭಾ ಕ್ಷೇತ್ರವಾರು ಲಾಕ್‍ಡೌನ್ ಮಾಡಲು ಆಯಾ ಶಾಸಕರಿಗೆ ಅಧಿಕಾರ ನೀಡಬೇಕು ಎಂದು ಹಾರೀಸ್ ಒತ್ತಾಯಿಸಿದರು.







