ದಿಲ್ಲಿಯತ್ತ ಮಿಡತೆಗಳ ದಂಡು: ಹೈ ಅಲರ್ಟ್ ಘೋಷಣೆ

ಹೊಸದಿಲ್ಲಿ, ಜೂ.27: ಬೆಳೆಗಳ ಮೇಲೆ ಮುಗಿಬಿದ್ದು ನಾಶಗೊಳಿಸುವ ಮಿಡತೆಗಳ ಹಿಂಡು ಶನಿವಾರ ಬೆಳಿಗ್ಗೆ ದಿಲ್ಲಿಯ ಹೊರವಲಯಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಮನೆಯ ಕಿಟಕಿ ಮತ್ತು ಬಾಗಿಲನ್ನು ಮುಚ್ಚಿಡುವಂತೆ ದಿಲ್ಲಿ ಸರಕಾರ ಜನತೆಗೆ ಸಲಹೆ ನೀಡಿದೆ.
ಎಲ್ಲಾ ಜಿಲ್ಲೆಗಳಲ್ಲೂ ಕಟ್ಟೆಚ್ಚರದ ಸ್ಥಿತಿ ಘೋಷಿಸಲಾಗಿದ್ದು, ಸಂಭಾವ್ಯ ಮಿಡತೆ ದಾಳಿಯಿಂದ ಪಾರಾಗಲು ಕೀಟನಾಶಕ ಸಿಂಪಡಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳದೊಂದಿಗೆ ಸಮನ್ವಯದಿಂದ ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.
ಮನೆಯೊಳಗಿದ್ದು ಪಾತ್ರೆ ಬಡಿಯುವ ಅಥವಾ ಇತರ ರೀತಿಯ ಸಪ್ಪಳ ಮಾಡುವುದು, ಜೋರು ಧ್ವನಿಯಲ್ಲಿ ಸಂಗೀತ ನುಡಿಸುವುದು, ಪಟಾಕಿ ಸಿಡಿಸುವುದು, ಬೇವಿನ ಎಲೆಗಳನ್ನು ಸುಡುವ ಮೂಲಕ ಮಿಡತೆಗಳನ್ನು ಓಡಿಸಬಹುದು ಎಂದು ದಿಲ್ಲಿ ಅಭಿವೃದ್ಧಿ ಇಲಾಖೆಯ ಆಯುಕ್ತರು ಸಲಹೆ ನೀಡಿದ್ದು, ಈ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಮಿಡತೆಗಳು ಸಾಮಾನ್ಯವಾಗಿ ಹಗಲು ಹೊತ್ತು ಹಾರಾಟ ನಡೆಸಿ ರಾತ್ರಿ ವಿಶ್ರಾಂತಿ ಪಡೆಯುತ್ತವೆ. ಅವುಗಳಿಗೆ ರಾತ್ರಿ ವಿಶ್ರಾಂತಿ ಪಡೆಯಲು ಬಿಡಬಾರದು. ರಾತ್ರಿ ವೇಳೆ ಮಲಾಥಿಯಾನ್ ಅಥವಾ ಕ್ಲೋರ್‌ಪಿರಿಫೋಸ್ ಸಿಂಪಡಿಸುವುದು ಉಪಯುಕ್ತವಾಗಿದೆ ಎಂದು ಜನತೆಗೆ ಸಲಹೆ ಮಾಡಲಾಗಿದೆ. ದಕ್ಷಿಣ ದಿಲ್ಲಿಯ ಅಸೋಲ ಭಟ್ಟಿ ಪ್ರದೇಶ ಹಾಗೂ ಛತ್ತರ್‌ಪುರ ಪ್ರದೇಶದಲ್ಲಿ ಮಿಡತೆಗಳ ದಂಡು ಕಾಣಿಸಿಕೊಂಡಿದ್ದು ದಿಲ್ಲಿಯ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿರುವ ಜಿಲ್ಲೆಗಳ ಅಧಿಕಾರಿಗಳು ಹೆಚ್ಚಿನ ಜಾಗೃತೆ ವಹಿಸಬೇಕೆಂದು ದಿಲ್ಲಿಯ ಪರಿಸರ ಇಲಾಖೆಯ ಸಚಿವ ಗೋಪಾಲ್ ರಾಯ್ ಸೂಚಿಸಿದ್ದಾರೆ.







