ತಮಿಳುನಾಡಿನಲ್ಲಿ ಪೊಲೀಸ್ ದೌರ್ಜನ್ಯದಿಂದ ಆಟೊ ಚಾಲಕ ಮೃತ್ಯು: ಆರೋಪ
ತಂದೆ-ಮಗನ ಸಾವು ಪ್ರಕರಣದ ಬೆನ್ನಲ್ಲೇ ಮತ್ತೊಂದು ಘಟನೆ
ಚೆನ್ನೈ: ತಂದೆ- ಮಗ ಪೊಲೀಸ್ ದೌರ್ಜನ್ಯಕ್ಕೆ ಬಲಿಯಾದ ಆರೋಪದ ಬೆನ್ನಲ್ಲೇ ತಮಿಳುನಾಡು ಪೊಲೀಸರ ದೌರ್ಜನ್ಯಕ್ಕೆ ಆಟೊ ಚಾಲಕನೊಬ್ಬ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾದ ಆಟೊ ಚಾಲಕರೊಬ್ಬರು 15 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದು ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ.
ಮೃತಪಟ್ಟ ಆಟೊ ಚಾಲಕನನ್ನು ಎನ್.ಕುಮಾರೇಶನ್ ಎಂದು ಗುರುತಿಸಲಾಗಿದ್ದು, ಜಮೀನು ವ್ಯಾಜ್ಯವೊಂದರ ಸಂಬಂಧ ವಿಚಾರಣೆಗಾಗಿ ಇವರನ್ನು ವಿಚಾರಣೆಗೆ ಕರೆಸಲಾಗಿತ್ತು. ಕಸ್ಟಡಿಯಲ್ಲಿ ಪೊಲೀಸರು ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ವಿಚಾರಣೆ ನಡೆದ ಒಂದು ದಿನ ಬಳಿಕ ಕುಮಾರೇಶನ್ ಮನೆಗೆ ಬಂದಿದ್ದರು. ಆದರೆ ದೌರ್ಜನ್ಯ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಬಳಿಕ ರಕ್ತ ವಾಂತಿ ಮಾಡಲು ಆರಂಭಿಸಿದ ಹಿನ್ನೆಲೆಯಲ್ಲಿ ಸುರಂದೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು.
ಕುಮಾರೇಶನ್ ಅವರ ಕಿಡ್ನಿ ಹಾಗೂ ಹೊಟ್ಟೆಯ ಭಾಗಕ್ಕೆ ಏಟಾಗಿದೆ ಎಂದು ವೈದ್ಯರು ಹೇಳಿದ್ದರು. ಆಗ ಕಸ್ಟಡಿಯಲ್ಲಿ ಪೊಲೀಸರು ನೀಡಿದ ಚಿತ್ರಹಿಂಸೆ ಬಗ್ಗೆ ಬಹಿರಂಗಪಡಿಸಿದರು. ಠಾಣೆಯ ಒಳಗೆ ಏನು ನಡೆದಿದೆ ಎನ್ನುವುದನ್ನು ಬಹಿರಂಗಪಡಿಸದಂತೆ ಪೊಲೀಸರು ಬೆದರಿಕೆ ಹಾಕಿದ್ದರು ಎಂದು ಕುಮಾರೇಶನ್ ಹೇಳಿದ್ದರು. ಕುಮಾರೇಶನ್ ಸಾವಿನ ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ಘಟನೆ ಸಂಬಂಧ ಸಬ್ ಇನ್‍ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಪೇದೆ ಕುಮಾರ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 174(3) ಅನ್ವಯ ಪ್ರಕರಣ ದಾಖಲಾಗಿದೆ.