ಕೋವಿಡ್ ಲಕ್ಷಣವಿರುವವರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸುವುದು ಕಾನೂನು ಬಾಹಿರ: ಸಚಿವ ಡಾ.ಸುಧಾಕರ್

ಬೆಂಗಳೂರು, ಜೂ. 28: ಕೋವಿಡ್ ಸೋಂಕಿತ ಅಥವಾ ಅಂತಹ ರೋಗ ಲಕ್ಷಣಗಳಿರುವವರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಯನ್ನು ನಿರಾಕರಿಸುವುದು ಕಾನೂನು ಬಾಹಿರ ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ರವಿವಾರ ಟ್ವೀಟ್ ಮಾಡಿರುವ ಅವರು, 'ಕೊರೋನ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡದಿರುವುದು ಕಾನೂನಿಗೆ ವಿರುದ್ಧ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳು ಚಿಕಿತ್ಸೆ ನೀಡದೆ ರೋಗಿಯನ್ನು ಅಲೆದಾಡಿಸುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು' ಎಂದು ಎಚ್ಚರಿಸಿದ್ದಾರೆ.
ಕೊರೋನ ವೈರಸ್ ಸೋಂಕಿತರು ಅಥವಾ ಶಂಕಿತ ಸೋಂಕಿತರು ಖಾಸಗಿ ಆಸ್ಪತ್ರೆಗೆ ಬಂದರೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ನಿರಾಕರಿಸಿದರೆ ಸರಕಾರ ಸಂಬಂಧಪಟ್ಟ ಖಾಸಗಿ ಆಸ್ಪತ್ರೆ ಅಥವಾ ವೈದ್ಯಕೀಯ ಸಂಸ್ಥೆ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಹೊರರಾಜ್ಯದವರಿಗೆ 14 ದಿನದ ಕ್ವಾರಂಟೈನ್
ತಂತ್ರಜ್ಞಾನ, ಹೆಚ್ಚಿನ ಸಿಬ್ಬಂದಿ ಮೂಲಕ ನಿಗಾ ವ್ಯವಸ್ಥೆಯನ್ನು ಸದೃಢಗೊಳಿಸಿ, ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವವರ ಕ್ವಾರಂಟೈನ್ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಮಹಾರಾಷ್ಟ್ರದಿಂದ ಬರುವವರಿಗೆ ಏಳು ದಿನ ಸಾಂಸ್ಥಿಕ ಕ್ವಾರಂಟೈನ್, ಏಳು ದಿನ ಗೃಹ ಕ್ವಾರಂಟೈನ್. ಇತರರಿಗೆ 14 ದಿನಗಳ ಗೃಹ ಕ್ವಾರಂಟೈನ್ ವಿಧಿಸಲಾಗುವುದು'
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ







