ಪ್ರತಿದಿನ ರಾತ್ರಿ 8ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿ: ಮುಖ್ಯ ಕಾರ್ಯದರ್ಶಿ ಆದೇಶ
ಬೆಂಗಳೂರು, ಜೂ. 28: ರಾಜ್ಯಾದ್ಯಂತ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ಜನರ ಚಲನವಲನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದ ಹಿನ್ನೆಲೆಯಲ್ಲಿ ರವಿವಾರ ಅಧಿಕೃತ ಆದೇಶ ಹೊರಡಿಸಿರುವ ಅವರು, ಜುಲೈ 5ರಿಂದ ಒಂದು ತಿಂಗಳ ಅವಧಿಗೆ ರವಿವಾರ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು. ಅಗತ್ಯ ಸರಕು ಸರಂಜಾಮುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಜುಲೈ 10ರಿಂದ ಆಗಸ್ಟ್ 8ರ ವರೆಗೆ ರಾಜ್ಯದ ಎಲ್ಲ ಸರಕಾರಿಸ ಇಲಾಖೆಗಳು, ಕಚೇರಿಗಳು, ನಿಗಮ/ಮಂಡಳಿಗಳು(ತುರ್ತು ಮತ್ತು ಅಗತ್ಯ ಸೇವೆ ಒದಗಿಸುವಂತಹ ಇಲಾಖೆಗಳನ್ನು ಹೊರತುಪಡಿಸಿ) ಎರಡನೆ ಮತ್ತು ನಾಲ್ಕನೆ ಶನಿವಾರವೂ ಸೇರಿದಂತೆ ಎಲ್ಲ ಶನಿವಾರವೂ ರಜೆ ಘೋಷಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ಪರಾಮರ್ಶಿಸಿರುವ ಸರಕಾರವು ಈ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅಗತ್ಯವೆಂದು ತೀರ್ಮಾನಿಸಿದೆ. ಹೀಗಾಗಿ ಮೇಲ್ಕಂಡಂತೆ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.







