ದ.ಕ. ಜಿಲ್ಲೆಯಲ್ಲಿ 12 ವೃದ್ಧರು ಸಹಿತ 97 ಮಂದಿಗೆ ಕೊರೋನ ಪಾಸಿಟಿವ್
28 ಸೋಂಕಿತರ ಮೂಲ ನಿಗೂಢ

ಮಂಗಳೂರು, ಜೂ.28: ದ.ಕ. ಜಿಲ್ಲೆಯಲ್ಲಿ ರವಿವಾರ ಬರೋಬ್ಬರಿ 97 ಮಂದಿಗೆ ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅತಿಹೆಚ್ಚು ಕೇಸ್‌ಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 673ಕ್ಕೆ ಏರಿಕೆಯಾಗಿದೆ.
ರವಿವಾರ ಒಂದೇ ದಿನ ಮೂವರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಮೂಲ ಪತ್ತೆಯಾಗದೇ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದು ಕೊರೋನವು ಸಮುದಾಯಕ್ಕೆ ಹಬ್ಬುತ್ತಿರುವ ಲಕ್ಷಣವೇ ಎನ್ನುವ ಆತಂಕ ಮನೆ ಮಾಡಿದೆ. ಕೊರೋನವು ಸರಣಿ ರೂಪದಲ್ಲಿ ವ್ಯಾಪಕಗೊಳ್ಳುತ್ತಿರುವುದು ಸಾರ್ವಜನಿಕ ಕಳವಳಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ರವಿವಾರ ಪತ್ತೆಯಾದ ಸೋಂಕಿತರ ಪೈಕಿ ಜೂ.10, 21, 22ರಂದು ಸೌದಿ ಅರೇಬಿಯದಿಂದ 29 ಮಂದಿ, ಜೂ.19ರಂದು ಕತರ್‌ನಿಂದ 26 ವರ್ಷದ ಯುವಕ ಆಗಮಿಸಿದ್ದರು. 21 ಮಂದಿಗೆ ಶೀತಜ್ವರದ ಲಕ್ಷಣದೊಂದಿಗೆ (ಐಎಲ್‌ಐ) ಸೋಂಕು ಕಾಣಿಸಿಕೊಂಡಿದೆ. ಉಸಿರಾಟ ಸಮಸ್ಯೆಯಿಂದಾಗಿ (ಎಸ್‌ಎಆರ್‌ಐ) ಐವರಲ್ಲಿ ಸೋಂಕು ಪತ್ತೆಯಾಗಿದೆ. 28 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ವೃದ್ಧರಲ್ಲಿ ಸೋಂಕು ಹೆಚ್ಚಿದ ಆತಂಕ: ಆರೋಗ್ಯ ಇಲಾಖೆಯಿಂದ ರವಿವಾರ ಪ್ರಕಟವಾದ ವರದಿಯಂತೆ ಜಿಲ್ಲೆಯ 12 ವೃದ್ಧರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಪೈಕಿ ಇಬ್ಬರು ಮಹಿಳೆಯರಿದ್ದರೆ ಉಳಿದವರೆಲ್ಲ ಪುರುಷರು. 78, 75, 74, 70, 68, 68, 64, 63, 62, 60 ಪುರುಷರು, 65, 60 ವರ್ಷದ ಮಹಿಳೆಯರಿಗೆ ಸೋಂಕು ತಗುಲಿದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಎಂಟು ಮಂದಿ ಡಿಸ್ಚಾರ್ಜ್: ಸಮಾಧಾನಕರ ಬೆಳವಣಿಗೆಯಲ್ಲಿ ರವಿವಾರ 70, 67 ವರ್ಷದ ವೃದ್ಧರು ಸೇರಿದಂತೆ ಆರು ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ 422 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ. ಈಗ ಚಿಕಿತ್ಸೆಯಲ್ಲಿರುವ ಬಹುತೇಕ ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
49 ವರ್ಷದ ವ್ಯಕ್ತಿಯು ಡಯಾಬಿಟಿಸ್‌ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದು, ಇವರನ್ನು ಐಸಿಯುನಲ್ಲಿ ದಾಖಲಿಸಿ, ಎಚ್‌ಎಫ್‌ಎನ್‌ಸಿ ಮೂಲಕ ಆಮ್ಲಜನಕ ನೀಡಲಾಗುತ್ತಿದೆ. 57 ವರ್ಷದ ಹೆಂಗಸನ್ನು ಲಿವರ್ ಕಾಯಿಲೆ, ಡಯಾಬಿಟಿಸ್, ಹೃದಯರೋಗ ಹಾಗೂ ನ್ಯುಮೋನಿಯದಿಂದ ಬಳಲುತ್ತಿದ್ದಾರೆ. ಇನ್ನು 78 ವರ್ಷದ ವೃದ್ಧನನ್ನು ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಪಾರ್ಕಿನ್‌ಸನ್ ಕಾಯಿಲೆ ಮತ್ತು ನ್ಯುಮೋನಿಯದಿಂದ ಬಳಲುತ್ತಿದ್ದಾರೆ. 39 ವರ್ಷದ ಪುರುಷ ನ್ಯುಮೋನಿಯದಿಂದ ಬಳಲುತ್ತಿದ್ದು, ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರವಿವಾರ ಒಟ್ಟು 178 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ 97 ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 377 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 480 ಮಂದಿಯ ವರದಿ ಇನ್ನಷ್ಟೇ ಬರಲು ಬಾಕಿಯಿದೆ







