ಬಾಣಸಿಗಗೆ ಕೊರೋನ: ಉಡುಪಿ ನಗರದ ಹೊಟೇಲ್ ಸೀಲ್ಡೌನ್
ಉಡುಪಿ, ಜೂ. 28: ಬಾಣಸಿಗರೊಬ್ಬರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಉಡುಪಿ ಬನ್ನಂಜೆಯ ಹೊಟೇಲನ್ನು ಇಂದು ಸೀಲ್ ಡೌನ್ ಮಾಡಲಾಗಿದೆ.
ಬಾಣಸಿಗ ನಾಲ್ಕು ದಿನಗಳ ಹಿಂದೆ ಶಿವಮೊಗ್ಗದಿಂದ ಬಂದು, ಎರಡು ದಿನಗಳ ಕಾಲ ಹೊಟೇಲಿನಲ್ಲಿ ಕೆಲಸ ಮಾಡಿದ್ದರು. ಈ ವೇಳೆ ಜ್ವರ ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಅವರು ಅಜ್ಜರಕಾಡು ಆಸ್ಪತ್ರೆಯಲ್ಲಿ ಕೊರೋನ ಪರೀಕ್ಷೆ ಮಾಡಿಸಿದ್ದರು. ಇಂದು ಅವರ ವರದಿಯಲ್ಲಿ ಕೊರೋನ ಸೋಂಕು ಇರುವುದು ದೃಢಪಟ್ಟಿದೆ.
ಆ ಹಿನ್ನೆಲೆಯಲ್ಲಿ ಮಧ್ಯಾಹ್ನ ಅಧಿಕಾರಿಗಳು ಹೊಟೇಲ್ನ್ನು ಸಂಪೂರ್ಣ ಸೀಲ್ಡೌನ್ ಮಾಡಿ ಕಂಟೇನ್ಮೆಂಟ್ ವಲಯವನ್ನಾಗಿ ಘೋಷಿಸಿದ್ದಾರೆ. ಈ ಹೊಟೇಲಿನ ಇತರ 16 ಕೆಲಸಗಾರರಿಗೆ ಕ್ವಾರಂಟೇನ್ ವಿಧಿಸಲಾಗಿದೆ. ಇದೀಗ ಈ ಹೊಟೇಲಿನಲ್ಲಿ ಕಳೆದ ಒಂದು ವಾರದಿಂದ ಊಟ ಸೇವಿಸಿದ ನೂರಾರು ಮಂದಿ ಗ್ರಾಹಕರಲ್ಲಿ ಆತಂಕ ಸೃಷ್ಠಿ ಮಾಡಿದೆ.
ಅದೇ ರೀತಿ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಇರುವ ಲಾಡ್ಜ್ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರಲ್ಲಿಯೂ ಕೊರೋನ ಸೋಂಕು ದೃಢಪಟ್ಟಿರುವ ಬಗ್ಗೆ ವರದಿ ಯಾಗಿದೆ.
Next Story