ಎಸೆಸೆಲ್ಸಿ ವಿದ್ಯಾರ್ಥಿಗಳು ಆತಂಕವಿಲ್ಲದೆ ಪರೀಕ್ಷೆ ಬರೆಯಲಿ: ಸಚಿವ ಸುಧಾಕರ್

ಬೆಂಗಳೂರು, ಜೂ.28: ಎಸೆಸೆಲ್ಸಿ ವಿದ್ಯಾರ್ಥಿಗಳು ಮನೆಯಿಂದ ಪರೀಕ್ಷಾ ಕೊಠಡಿ ಹಾಗೂ ಅಲ್ಲಿಂದ ಸುರಕ್ಷಿತವಾಗಿ ಮನೆಗೆ ತಲುಪುವವರೆಗೆ ರಾಜ್ಯ ಸರಕಾರ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆಯನ್ನು ಬರೆಯಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್ ವಿತರಣೆ, ಶುಚಿತ್ವಕ್ಕೆ ಅದ್ಯತೆ, ಸುರಕ್ಷಿತ ಅಂತರ ಸೇರಿದಂತೆ ಎಲ್ಲ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಕೋವಿಡ್-19 ಕುರಿತು ಯಾವುದೇ ಭಯವಿಲ್ಲದೆ ನಿರಾತಂಕವಾಗಿ ಪರೀಕ್ಷೆಯನ್ನು ಎದುರಿಸಲಿ ಎಂದು ಹೇಳಿದ್ದಾರೆ.
ಗುರುವಾರ ಮತ್ತು ಶನಿವಾರ ನಡೆದ ಪರೀಕ್ಷೆಗಳಲ್ಲಿ ಶೇ.98ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಅದೇ ಮಾದರಿಯಲ್ಲಿ ಮುಂದಿನ ಪರೀಕ್ಷೆಗೂ ವಿದ್ಯಾರ್ಥಿಗಳು ಹಾಜರಾಗಲಿ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರಕಾರ ಎಲ್ಲ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಟ್ವೀಟ್ ಮೂಲಕ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.





