ಕಾಮೇಗೌಡ ನಿರ್ಮಿಸಿರುವ ಕೆರೆಗಳಿಗೆ ಸಂಪರ್ಕ ಕಲ್ಪಿಸಲು ಕ್ರಮ: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಭರವಸೆ

ಕಾಮೇಗೌಡ
ಬೆಂಗಳೂರು, ಜೂ. 28: 'ಮಂಡ್ಯದ ಭಗೀರಥ' ಎಂದೇ ಪ್ರಸಿದ್ಧಿ ಪಡೆದಿರುವ ರೈತ ಕಾಮೇಗೌಡ ಅವರೊಂದಿಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೋ ಸಂವಾದ ನಡೆಸಿ, ಕಾಮೇಗೌಡ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ರವಿವಾರ ಹೊಸದಿಲ್ಲಿಯಿಂದ ವಿಡಿಯೋ ಸಂವಾದದ ಮೂಲಕ ರೈತ ಕಾಮೇಗೌಡ ಅವರೊಂದಿಗೆ ಚರ್ಚಿಸಿದ ಗಜೇಂದ್ರ ಸಿಂಗ್ ಶೇಖಾವತ್, 84ರ ಇಳಿ ವಯಸ್ಸಿನಲ್ಲೂ ಪ್ರಕೃತಿ ಸೇವೆ ಮಾಡುವ ಹುಮ್ಮಸ್ಸನ್ನು ಹೊಂದಿರುವ ಕಾಮೇಗೌಡರು ಕಟ್ಟಿರುವ 16 ಕೆರೆಗಳನ್ನು ನೋಡಿ, ಅವರ ಜನಪರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಕಾಮೇಗೌಡರು ನಿರ್ಮಿಸಿದ ಕೆರೆಗಳ ನಡುವೆ ಸಂಪರ್ಕ ಕಲ್ಪಿಸುವ ಮೂಲಕ ಶಾಶ್ವತವಾಗಿ ನೀರು ನಿಲ್ಲುವ ವ್ಯವಸ್ಥೆ ಮಾಡಲು ಇದೇ ವೇಳೆ ಮನವಿ ಮಾಡಿದರು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಲಾಗುವುದು ಎಂದು ಗಜೇಂದ್ರ ಸಿಂಗ್ ಶೇಖಾವತ್ ಭರವಸೆ ನೀಡಿದರು.
ಪರಿಸರದ ಬಗ್ಗೆ ಕಾಮೇಗೌಡ ಮತ್ತು ಅವರು ಕುಟುಂಬದ ಸದಸ್ಯರಿಗೆ ಇರುವ ಕಾಳಜಿ ಹಾಗೂ ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿದ ಕೇಂದ್ರ ಸಚಿವರು, ಈ ನಿಟ್ಟಿನಲ್ಲಿ ನಿಮ್ಮ ಕಾರ್ಯಗಳಿಗೆ ಸರಕಾರ ಬೆಂಬಲ ನೀಡಲಿದೆ. ನಿಮ್ಮ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ನೋಡಿ ಅಚ್ಚರಿಯಾಗಿದ್ದು, ನಿಮ್ಮೊಂದಿಗೆ ಮಾತನಾಡಿದ್ದು ಸಂತೋಷವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.







