ನಿಯಂತ್ರಣಕ್ಕೆ ಸಿಗದ ಕೊರೋನ: ಸಿಲಿಕಾನ್ ಸಿಟಿ ಬೆಂಗಳೂರು ಖಾಲಿ ಖಾಲಿ !
ಬಸ್ಸುಗಳು, ಖಾಸಗಿ ವಾಹನಗಳ ಸಂಚಾರ ವಿರಳ

ಬೆಂಗಳೂರು, ಜೂ.28: ಸಿಲಿಕಾನ್ ಸಿಟಿ ಬೆಂಗಳೂರು ದಿನೇದಿನೇ ಹೆಚ್ಚುತ್ತಿರುವ ಕೊರೋನ ಸೋಂಕಿನಿಂದ ತಲ್ಲಣಿಸಿದೆ. ನಿಯಂತ್ರಣಕ್ಕೆ ಸಿಗದ ಕೊರೋನ ಸೋಂಕಿನಿಂದ ನಗರದ ಜನತೆ ತತ್ತರಿಸಿದ್ದಾರೆ. ರವಿವಾರದಂದು ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಕೊರೋನವನ್ನು ಕಟ್ಟಿಹಾಕುವಲ್ಲಿ ಆರೋಗ್ಯ ಇಲಾಖೆ ಶತಃಪ್ರಯತ್ನದ ನಡುವೆಯೂ ತನ್ನ ಆರ್ಭಟ ಮುಂದುವರಿಸಿರುವುದು ಪರಿಸ್ಥಿತಿ ಎಲ್ಲಿಗೆ ತಲುಪುತ್ತದೆಯೋ ಎಂಬ ಆತಂಕ ಎಲ್ಲರಲ್ಲೂ ಕಾಡುತ್ತಿದೆ.
ನಗರದಲ್ಲಿ ಕೊರೋನ ಮಹಾಸ್ಫೋಟವಾಗುತ್ತಿದ್ದಂತೆ ಭಯಭೀತರಾದ ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಮಾಡಲಾರಂಭಿಸಿದ್ದಾರೆ. ಕೊರೋನ ಎಲ್ಲಿ ತಮಗೆ ಆಂಟಿಬಿಡುತ್ತದೆಯೋ ಎಂಬ ಕಾರಣಕ್ಕಾಗಿ ಜನರು ನಗರದಿಂದ ತಮ್ಮ ಊರಿಗೆ ನಿನ್ನೆ ರಾತ್ರಿಯಿಂದಲೇ ಹೊರಟಿದ್ದಾರೆ.
ನಗರದಲ್ಲಿ ಕೊರೋನಗೆ ಹೆದರಿ ಜನ ಹೆಚ್ಚಾಗಿ ಮನೆಯಿಂದ ಹೊರಬರದೆ ಇರುವುದರಿಂದ ಇಡೀ ಬೆಂಗಳೂರಿನ ರಸ್ತೆಗಳು ಬಿಕೋ ಎನ್ನುತ್ತಿವೆ. ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ಬಸ್ಸುಗಳು ಸೇರಿದಂತೆ ಖಾಸಗಿ ವಾಹನಗಳು ರಸ್ತೆಯಲ್ಲಿ ವಿರಳವಾಗಿ ಸಂಚರಿಸಿದವು.
ನಗರದಲ್ಲಿ ಮಾರುಕಟ್ಟೆಗಳು ಮುಚ್ಚಿರುವುದರಿಂದ ವ್ಯಾಪಾರಿಗಳು ಮತ್ತು ಗ್ರಾಹಕರು ಅತ್ತ ಸುಳಿಯದೆ ಇದ್ದುದ್ದರಿಂದ ಜನರ ಸಂಚಾರ ವಿರಳವಾಗಿತ್ತು. ವೀಕ್ ಎಂಡ್ ಆದರೂ ನಗರದ ಪ್ರಿಯರು, ಮಾಲ್ ಪ್ರಿಯರು, ಅತ್ತ ಸುಳಿಯದೆ ಇದ್ದುದ್ದರಿಂದ ಮಾಲ್ ಸಂಪೂರ್ಣ ಬಂದ್ ಅದ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರದಲ್ಲಿ ರವಿವಾರ ಒಂದೇ ದಿನ 783 ಮಂದಿಗೆ ಸೋಂಕು ಕಾಣಿಸಿದೆ. ಇದರಿಂದಾಗಿ ನಗರದಲ್ಲಿ ಸೋಂಕಿತರ ಸಂಖ್ಯೆ 3,314ಕ್ಕೆ ಏರಿರುವುದು ಮತ್ತು ಸತ್ತವರ ಸಂಖ್ಯೆ 88ಕ್ಕೆ ಏರಿರುವುದು ನಗರ ಸುರಕ್ಷಿತವಲ್ಲ ಎಂಬುದನ್ನು ಸಾಬೀತುಪಡಿಸಿದೆ. ನಗರದಲ್ಲಿ ಅಂಕೆ ಮೀರಿ ಏರುತ್ತಿರುವ ಕೊರೋನವನ್ನು ನಿಯಂತ್ರಿಸಲು ಸರಕಾರ ಹಲವು ಪ್ರಯತ್ನ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳು ಇಲ್ಲದಿರುವುದೂ ಕೂಡ ರೋಗಿಗಳನ್ನು ಯಾವ ಆಸ್ಪತ್ರೆಗೆ ಕಳಿಹಿಸಬೇಕು ಎಂಬ ಗೊಂದಲವೂ ಕೂಡ ಎದುರಾಗಿದೆ. ಆದುದರಿಂದಾಗಿ ಕೊರೋನ ರೋಗ ಬಂದವರು ತಾವು ಬದುಕಿ ಉಳಿಯುತ್ತೇವೆಯೇ ಎಂಬ ಅನುಮಾನವೂ ಕಾಡಲಾರಂಭಿಸಿದೆ.
ಕುಟುಂಬದವರೊಂದಿಗೆ ಬೆಂಗಳೂರಿನಿಂದ ತಮ್ಮ ಊರಿಗೆ ಹೊರಟಿರುವ ಹಿನ್ನೆಲೆಯಲ್ಲಿ ನವಯುಗ ಟೋಲ್ ಬಳಿ ಸಂಚಾರ ದಟ್ಟಣೆ ಉಂಟಾಗಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನವಯುಗ ಟೋಲ್‍ನಲ್ಲಿ ಸಾಲಾಗಿ ವಾಹನಗಳು ನಿಂತಿವೆ. ಈ ವಾಹನ ದಟ್ಟಣೆ ನಗರದಲ್ಲಿ ಕೊರೋನ ಮಹಾ ಸ್ಫೋಟಕ್ಕೆ ಜನರು ಹೆದರಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಇನ್ನೂ ಕೆಲವರು ಬೆಂಗಳೂರಿಗಿಂತ ತಮ್ಮ ಊರುಗಳೇ ಸುರಕ್ಷಿತ ಎಂದು ಮನೆ ಖಾಲಿ ಮಾಡಿಕೊಂಡು ಲಗೇಜ್ ಸಮೇತ ಬೆಂಗಳೂರು ಬಿಟ್ಟು ಹೊರಟಿದ್ದಾರೆ. ಮಕ್ಕಳಿಗೆ ಶಾಲೆ ಇಲ್ಲ, ನಮಗೂ ಮಾಡಲು ಕೆಲಸವಿಲ್ಲ. ಇದರಿಂದ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಮ್ಮ ಊರಿಗೆ ಹೋಗುತ್ತಿದ್ದೇವೆ ಎಂದು ಜನರು ಹೇಳುತ್ತಿದ್ದಾರೆ.
ಈ ಮಧ್ಯೆ ಸರಕಾರ ಪ್ರತಿ ರವಿವಾರ ಲಾಕ್‍ಡೌನ್ ಮಾಡಲು ನಿರ್ಧರಿಸಿರುವುದು ಜನರು ತಮ್ಮ ಊರಿಗೆ ತೆರಳಲು ಕಾರಣವಾಗಿದೆ. ಹಾಗೆಯೇ ನೈಟ್ ಕಫ್ರ್ಯೂ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತಿದೆ. ರಾತ್ರಿ 8 ಗಂಟೆಯಿಂದಲೇ ಕಫ್ರ್ಯೂ ಜಾರಿಯಾಗಲಿದ್ದು, ಅನಾವಶ್ಯಕವಾಗಿ ಹೊರ ಬರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರಕಾರ ನಿರ್ಧರಿಸಿರುವುದು ನಗರದಲ್ಲಿ ಸುರಕ್ಷತೆ ಬಗ್ಗೆ ಅಪನಂಬಿಕೆ ಉಂಟಾಗಿದೆ.







