ದಿಲ್ಲಿ ಹಿಂಸಾಚಾರದ ವೇಳೆ 11 ಮುಸ್ಲಿಂ, 2 ಹಿಂದೂ ಪ್ರಾರ್ಥನಾ ಸ್ಥಳಗಳಿಗೆ ಹಾನಿ
ಆರ್ ಟಿಐ ಅರ್ಜಿಗೆ ದಿಲ್ಲಿ ಪೊಲೀಸರ ಉತ್ತರ
ಹೊಸದಿಲ್ಲಿ : ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಎಂಟು ಮಸೀದಿಗಳು, ಎರಡು ದೇವಸ್ಥಾನಗಳು, ಎರಡು ಮದ್ರಸಗಳು ಹಾಗೂ ಒಂದು ದರ್ಗಾ ಹಾನಿಗೊಂಡಿದ್ದವು ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಕೇಳಲಾದ ವಿವರಗಳಿಗೆ ದಿಲ್ಲಿ ಪೊಲೀಸರು ನೀಡಿದ ಉತ್ತರ ತಿಳಿಸಿದೆ ಎಂದು thequint.com ವರದಿ ಮಾಡಿದೆ.
ದಿಲ್ಲಿ ಮೂಲದ ಆರ್‍ಟಿಐ ಕಾರ್ಯಕರ್ತ ಯೂಸುಫ್ ನಖಿ ಅವರು ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿ ಮಾಹಿತಿ ಕೇಳಿದ್ದರು.
ಹಿಂಸಾಚಾರದ ವೇಳೆ ಎಷ್ಟು ಮುಸ್ಲಿಂ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು ಎಷ್ಟು ಹಾನಿಗೊಂಡಿದ್ದವು ಹಾಗೂ ಎಷ್ಟು ಮುಸ್ಲಿಂ ಪ್ರಾರ್ಥನಾ ಸ್ಥಳಗಳನ್ನು ಸುಟ್ಟು ಹಾಕಲಾಗಿತ್ತು ಎಂಬ ನಖಿ ಅವರ ನಿರ್ದಿಷ್ಟ ಪ್ರಶ್ನೆ ಇದ್ದ ಅರ್ಜಿಗೆ ಉತ್ತರಿಸಿದ ಪೊಲೀಸರು “ಲಭ್ಯ ದಾಖಲೆಗಳ ಪ್ರಕಾರ ಎಂಟು ಮಸೀದಿಗಳು, ಎರಡು ಮದ್ರಸಾ ಹಾಗೂ ಒಂದು ದರ್ಗಾ ಹಾನಿಗೊಂಡಿದ್ದವು'' ಎಂದು ಮಾಹಿತಿ ನೀಡಿದ್ದಾರೆ.
ಆದರೆ ದಿಲ್ಲಿ ವಕ್ಫ್ ಮಂಡಳಿ ನೀಡಿದ ಅಂಕಿ ಅಂಶಗಳ ಪ್ರಕಾರ ಹಿಂಸಾಚಾರದ ವೇಳೆ 19 ಮಸೀದಿಗಳು ಹಾನಿಗೊಂಡಿದ್ದವು.
ನಖಿ ಅವರ ಇನ್ನೊಂದು ಮಾಹಿತಿ ಹಕ್ಕು ಕಾಯಿದೆ ಅರ್ಜಿ ಹಾನಿಗೊಂಡ ಹಿಂದು ದೇವಳಗಳ ವಿವರ ಕೇಳಿತ್ತು. ಇದಕ್ಕೆ ಎರಡು ಎಂದು ಉತ್ತರ ನೀಡಿದ್ದ ಪೊಲೀಸರು ಅದೇ ಸಮಯ ಯಾವೆಲ್ಲಾ ಪ್ರಾರ್ಥನಾ ಸ್ಥಳಗಳು ಹಾನಿಗೊಂಡಿದ್ದವು ಎಂಬ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಮಸೀದಿಗಳು, ಮದ್ರಸ ಹಾಗೂ ದರ್ಗಾಗಳ ಮೇಲಿನ ದಾಳಿ ಸಂಬಂಧ 11 ಎಫ್‍ಐಆರ್ ಗಳು ದಾಖಲಾಗಿವೆ ಹಾಗೂ 31 ಜನರನ್ನು ಬಂಧಿಸಲಾಗಿದೆ, ಅವರ ಪೈಕಿ ಏಳು ಮಂದಿ ಜಾಮೀನಿನ ಮೇಲೆ ಹೊರ ಬಂದಿದ್ದು ಇಲ್ಲಿಯ ತನಕ ನಾಲ್ಕು ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದಿದ್ದಾರೆ.
ಹಿಂದು ದೇವಳಗಳಿಗೆ ಹಾನಿ ಪ್ರಕರಣ ಸಂಬಂಧ ಎರಡು ಎಫ್‍ಐಆರ್‍ಗಳು ದಾಖಲಾಗಿವೆ. ಒಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಹಾಗೂ ಇಬ್ಬರನ್ನು ಬಂಧಿಸಲಾಗಿದೆ. ಆದರೆ ಅವರು ಇನ್ನೂ ಜಾಮೀನಿನ ಮೇಲೆ ಹೊರಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತರಾದವರ ಕುರಿತು ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.