ತೈಲ ಬೆಲೆ ಏರಿಕೆ ವಿರೋಧಿಸಿ ಉಡುಪಿ ಕಾಂಗ್ರೆಸ್ ಧರಣಿ

ಉಡುಪಿ, ಜೂ.29: ತೈಲ ಬೆಲೆ ಏರಿಕೆ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಸೋಮವಾರ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮರ್ ಕೊಡವೂರು, ಕೇಂದ್ರ ಸರಕಾರದ ತೈಲ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ಮೂರಾಬಟ್ಟೆಯಾಗುತ್ತಿದೆ. ಒಳ್ಳೆಯ ದಿನಗಳನ್ನು ಕೊಡುವುದಾಗಿ ಸುಳ್ಳು ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಇದೀಗ ಜನತೆಯನ್ನು ಕಷ್ಟ ಕಾರ್ಪಣ್ಯಕ್ಕೆ ದೂಡುತ್ತಿದೆ. ಇದೇ ರೀತಿ ಮುಂದುವರಿದರೆ ಈ ದೇಶದ ಜನ ರೊಚ್ಚಿಗೆದ್ದು ಹೋರಾಟ ನಡೆಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಎಲ್ಲಾ ರಂಗದಲ್ಲೂ ಸರಕಾರ ದೇಶದ ಜನಹಿತವನ್ನು ಕಾಯುವಲ್ಲಿ ವಿಫಲ ವಾಗುತ್ತಿದೆ. ಅದನ್ನು ಮರೆಮಾಚಲು ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಾಗ ಕೂಡಾ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಇದನ್ನು ಸಮ ತೋಲನ ಮಾಡಲಾಗದೆ ಸರಕಾರ ಅದರ ಬಗ್ಗೆ ನಿರ್ಲಕ್ಷ ದೋರಣೆಯನ್ನು ತೋರಿ ಸುಳ್ಳುಗಳ ಸಾಮ್ರಾಜ್ಯದ ಮೇಲೆ ದೇಶವನ್ನು ಆಳುತ್ತಿದೆ ಎಂದು ಅವರು ಟೀಕಿಸಿದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು.ಆರ್.ಸಭಾಪತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಪೂರ್, ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ ಮಾತನಾಡಿದರು. ಬಳಿಕ ಈ ಕುರಿತ ಮನವಿಯನ್ನು ಉಡುಪಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ನರಸಿಂಹಮೂರ್ತಿ, ಶಬ್ಬಿರ್ ಅಹ್ಮದ್, ಅಣ್ಣಯ್ಯ ಶೇರಿ ಗಾರ್, ವೈ.ಸುಕುಮಾರ್ ಪಡುಬಿದ್ರಿ, ರಾಜು ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಮಹಾಬಲ ಕುಂದರ್, ಕೀರ್ತಿ ಶೆಟ್ಟಿ, ಜ್ಯೋತಿ ಹೆಬ್ಬಾರ್, ನವೀನ್ ಚಂದ್ರ ಸುವರ್ಣ, ಮದನ್ ಕುಮಾರ್, ಪ್ರದೀಪ್ ಕುಮಾರ್ ಶೆಟ್ಟಿ, ಮಂಜುನಾಥ ಪೂಜಾರಿ, ಶೇಖರ್ ಮಡಿವಾಳ, ಶಂಕರ್ ಕುಂದರ್, ಹರಿ ಪ್ರಸಾದ್ ಶೆಟ್ಟಿ, ಗೀತಾ ವಾಗ್ಲೆ, ಯತೀಶ್ ಕರ್ಕೇರಾ, ಕುಶಲ್ ಶೆಟ್ಟಿ, ಜನಾರ್ದನ ಭಂಡಾ ರ್ಕಾರ್, ರೊಶನಿ ಒಲಿವರ್, ಕೃಷ್ಣಮೂರ್ತಿ ಅಚಾರ್ಯ, ಡಾ. ಸುನೀತಾ ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಳ, ಉದ್ಯಾವರ ನಾಗೇಶ್ ಕುಮಾರ್, ಶಶಿಧರ ಶೆಟ್ಟಿ ಎಲ್ಲೂರು, ಪ್ರಶಾಂತ್ ಜತ್ತನ್ನ, ಇಸ್ಮಾಯಿಲ್ ಆತ್ರಾಡಿ ಮೊದಲಾದವರು ಉಪಸ್ಥಿತರಿದ್ದರು. ರೊಸಾಲಿಯಾ ಕಾರ್ಡೋಜ ಕಾರ್ಯಕ್ರಮ ನಿರೂಪಿಸಿದರು.







