ದನ ಕಳವಿಗೆ ಹೊಂಚು ಹಾಕುತ್ತಿದ್ದ ಆರೋಪ : ಇಬ್ಬರ ಬಂಧನ; ಕಾರು ಸಹಿತ ಸೊತ್ತು ವಶ
ಮಂಗಳೂರು, ಜೂ.30: ದನ ಕಳವಿಗೆ ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಜ್ಪೆ ಸಮೀಪದ ಒಡ್ಡದಕಲ ಎಂಬಲ್ಲಿ ಮಂಗಳೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಜ್ಪೆಯ ಕೊಂಚಾರು ನಿವಾಸಿ ಫೈಝಲ್ (34) ಹಾಗೂ ಶಾಂತಿಗುಡ್ಡೆ ನಿವಾಸಿ ಸಫ್ವಾನ್ (26) ಬಂಧಿತರು.
ಆರೋಪಿಗಳಿಂದ ಸ್ವಿಫ್ಟ್ ಕಾರು ಹಾಗು ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಬಜ್ಪೆ ಠಾಣೆಗೆ ಬಂದ ಖಚಿತ ಮಾಹಿತಿಯ ಆಧಾರದಲ್ಲಿ ಬಜ್ಪೆವೃತ್ತ ನಿರೀಕ್ಷಕ ಕೆ.ಆರ್. ನಾಯ್ಕೆ, ಠಾಣಾಧಿಕಾರಿ ರಾಘವೇಂದ್ರ ನಾಯ್ಕೆ ಮತ್ತು ಸಿಬ್ಬಂದಿ ದಾಳಿ ನಡೆಸಿ, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಬಂಧಿತ ಆರೋಪಿ ಫೈಝಲ್ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ದನಕಳವು, ಚೆಕ್‌ಬೌನ್ಸ್ ಸೇರಿದಂತೆ ಹಲವು ಪ್ರಕರಣಗಳಿದ್ದು, ಸಫ್ವಾನ್ ವಿರುದ್ಧ ಕೊಲೆಯತ್ನ, ಬೆದರಿಕೆ, ಹಲ್ಲೆ ಪ್ರಕರಣಗಳ ಆರೋಪಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





