ವೈದ್ಯರ ಸೇವೆ ವಿಸ್ತರಿಸಿ ಸರಕಾರ ಆದೇಶ
ಬೆಂಗಳೂರು, ಜೂ.30: ಕೋವಿಡ್ 19 ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನಿವೃತ್ತಿಯಾಗಿರುವ ಹಾಗೂ ನಿವೃತ್ತಿಯಾಗಲಿರುವ ವೈದ್ಯಕೀಯ, ಅರೆ ವೈದ್ಯಕೀಯ, ಪೂರಕವಾಗಿರುವ ಕ್ಲಿನಿಕಲ್ ಹಾಗೂ ನಾನ್‍ಕ್ಲಿನಿಕಲ್ ಸಿಬ್ಬಂದಿಗಳ ಸೇವೆಯನ್ನು ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ.
ಸಿಬ್ಬಂದಿಯು ಮಾ.31 ಹಾಗೂ ಜೂ.30ರವರೆಗೆ ವಯೋ ನಿವೃತ್ತಿ ಹೊಂದಿ ವಿಸ್ತರಿತ ಅವಧಿಯಲ್ಲಿರುವ ಹಾಗೂ ನ.30 ರವರೆಗೆ ವಯೋನಿವೃತ್ತಿ ಹೊಂದಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ವೈದ್ಯಕೀಯ, ಅರೆ ವೈದ್ಯಕೀಯ, ಪೂರಕವಾಗಿರುವ ಕ್ಲಿನಿಕಲ್ ಮತ್ತು ಸಿಬ್ಬಂದಿಗಳ ಸೇವೆ ವಿಸ್ತರಿಸಲಾಗಿದೆ.
ಮಾ.31, ಎ.31, ಮೇ 31 ಹಾಗೂ ಜೂ.30ರ ನಂತರ ವಯೋನಿವೃತ್ತಿ ಹೊಂದುವವರನ್ನು ಮುಂದಿನ ಆರು ತಿಂಗಳವರೆಗೆ, ಜು.31ರ ನಂತರ ವಯೋನಿವೃತ್ತಿ ಹೊಂದುವವರನ್ನು ಮುಂದಿನ ಐದು ತಿಂಗಳವರೆಗೆ, ಆ.31ರ ನಂತರ ವಯೋನಿವೃತ್ತಿ ಹೊಂದುವವರನ್ನು ಮುಂದಿನ ನಾಲ್ಕು ತಿಂಗಳವರೆಗೆ, ಸೆ.30 ನಂತರ ವಯೋನಿವೃತ್ತಿ ಹೊಂದುವವರನ್ನು ಮುಂದಿನ ಮೂರು ತಿಂಗಳವರೆಗೆ, ಅ.31ರ ನಂತರ ವಯೋನಿವೃತ್ತಿ ಹೊಂದುವವರನ್ನು ಮುಂದಿನ ಎರಡು ತಿಂಗಳವರೆಗೆ ಹಾಗೂ ನ.31ರ ನಂತರ ವಯೋನಿವೃತ್ತಿ ಹೊಂದುವವರನ್ನು ಮುಂದಿನ ಒಂದು ತಿಂಗಳ ಅವಧಿಗೆ ವಿಸ್ತರಿಸಿ ಸರಕಾರ ಆದೇಶಿಸಿದೆ.