ಮಧ್ಯಪ್ರದೇಶದಲ್ಲಿ ಶಿಶು ಮರಣ ಪ್ರಮಾಣ ಅತ್ಯಧಿಕ : ವರದಿ
ಹೊಸದಿಲ್ಲಿ : ಪ್ರತಿ ಸಾವಿರ ನವಜಾತ ಶಿಶುಗಳ ಪೈಕಿ 48 ಶಿಶುಗಳು ಮರಣ ಹೊಂದುತ್ತಿರುವ ಮಧ್ಯಪ್ರದೇಶ ಇಡೀ ದೇಶದಲ್ಲೇ ಗರಿಷ್ಠ ಶಿಶು ಮರಣ ದಾಖಲಾಗುತ್ತಿರುವ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಸಾವಿರ ಮಕ್ಕಳ ಪೈಕಿ ಏಳು ಶಿಶುಗಳು ಮೃತಪಡುತ್ತಿರುವ ಕೇರಳ ಕನಿಷ್ಠ ಶಿಶುಮರಣ ಪ್ರಮಾಣ ದಾಖಲಿಸಿದೆ.
ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಅಂಕಿ ಅಂಶಗಳ ಆಯುಕ್ತರ ಕಚೇರಿಯ ಇತ್ತೀಚಿನ ಅಂಕಿ ಅಂಶಗಳಿಂದ ಈ ವಿಷಯ ಬೆಳಕಿಗೆ ಬಂದಿದೆ. ಭಾರತದಲ್ಲಿ 2017ರಲ್ಲಿ ಸಾವಿರಕ್ಕೆ 33ರಷ್ಟಿದ್ದ ಶಿಶು ಮರಣ ಪ್ರಮಾಣ, 2018ರಲ್ಲಿ 32ಕ್ಕೆ ಇಳಿದಿದೆ.
ಅಂತೆಯೇ ಜನನ ದರ ಬಿಹಾರದಲ್ಲಿ ಗರಿಷ್ಠ (26.2) ಪ್ರಮಾಣದಲ್ಲಿದ್ದು, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ (11.2) ಕನಿಷ್ಠ. ಛತ್ತೀಸ್‌ಗಢದಲ್ಲಿ ಗರಿಷ್ಠ ಸಾವಿನ ದರ (8) ದಾಖಲಾಗಿದ್ದು, ದೆಹಲಿಯಲ್ಲಿ ಸಾವಿನ ದರ ಕನಿಷ್ಠ (3.3).
ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ಬಿಡುಗಡೆ ಮಾಡಿದ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ ಬುಲೆಟಿನ್‌ನಲ್ಲಿ ಈ ಅಂಕಿ ಅಂಶಗಳನ್ನು ನೀಡಲಾಗಿದೆ.
ಕಳೆದ ನಾಲ್ಕು ದಶಕಗಳ ಹಿಂದೆ ಅಂದರೆ 1971ರಲ್ಲಿ ದೇಶದಲ್ಲಿ 14.9ರಷ್ಟಿದ್ದ ಸಾವಿನ ದರ 2018ರಲ್ಲಿ 6.2ಕ್ಕೆ ಇಳಿದಿದೆ. ಗ್ರಾಮೀಣ ಪ್ರದೇಶ ಗಳಲ್ಲಿ ಸಾವಿನ ದರ ತೀವ್ರ ಇಳಿಮುಖವಾಗಿದೆ. ಕಳೆದ ಒಂದು ದಶಕದಲ್ಲಿ ಸಾವಿನ ದರ 7.3ರಿಂದ 6.2ಕ್ಕೆ ಇಳಿದಿದೆ. ನಗರ ಪ್ರದೇಶಗಳಲ್ಲಿ 7.8ರಿಂದ 6.7ಕ್ಕೆ ಇಳಿದರೆ, ಗ್ರಾಮೀಣ ಪ್ರದೇಶಗಳಲ್ಲಿ 5.8ರಿಂದ 5.1ಕ್ಕೆ ಇಳಿದಿದೆ.