ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನಾಳೆ ಪದಗ್ರಹಣ

ಬೆಂಗಳೂರು, ಜು. 1: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿಯ ನೂತನ ಕಟ್ಟಡದ ಆವರಣದಲ್ಲಿ ನಡೆಯಲಿರುವ ಸರಳ ಮತ್ತು ವಿನೂತನ ಸಮಾರಂಭದಲ್ಲಿ ಗುರುವಾರ ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಮಾರಕ ಕೊರೋನ ವೈರಸ್ ಸೋಂಕಿನ ಮಾರ್ಗಸೂಚಿ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕೆಪಿಸಿಸಿಯ ಮೂವರು ನೂತನ ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಪ್ರಮುಖ ಮುಖಂಡರು, ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಸೇರಿದಂತೆ ಕೆಲವರಿಗಷ್ಟೇ ಆಹ್ವಾನ ನೀಡಲಾಗಿದೆ. ಬೆಳಗ್ಗೆ 10:30ಕ್ಕೆ ಕಾಂಗ್ರೆಸ್ ಸೇವಾದಳದ ಗೌರವ ರಕ್ಷೆ, ಧ್ವಜಾರೋಹಣದೊಂದಿಗೆ ವಿಧ್ಯುಕ್ತವಾಗಿ ಕಾರ್ಯಕ್ರಮ ಆರಂಭಗೊಳ್ಳಲಿದೆ.
ವಂದೇ ಮಾತರಂ, ಸ್ವಾಗತ ಭಾಷಣದ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಸಂವಿಧಾನದ ಪೀಠಿಕೆ ಪಠಣ, ಡಿ.ಕೆ.ಶಿವಕುಮಾರ್ ಸೇರಿದಂತೆ ನೂತನ ಪದಾಧಿಕಾರಿಗಳಿಂದ ಸಾಮೂಹಿಕ ಪ್ರತಿಜ್ಞೆ ಬಳಿಕ ಅಧಿಕಾರ ಹಸ್ತಾಂತರ ನಡೆಯಲಿದೆ. ಕೆಪಿಸಿಸಿಯ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ಹಾಗೂ ಈಶ್ವರ್ ಬಿ.ಖಂಡ್ರೆ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ಮಧ್ಯಾಹ್ನ 12ಕ್ಕೆ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಭಾಷಣ ಮಾಡಲಿದ್ದಾರೆ. ನಂತರ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಷಣದೊಂದಿಗೆ ವಂದನಾರ್ಪಣೆ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.
ನೇರ ಪ್ರಸಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮವನ್ನು ಟಿವಿ ಮಾಧ್ಯಮ, ಸಾಮಾಜಿಕ ಜಾಲತಾಣಗಳನ್ನು ನೇರ ಪ್ರಸಾರವಾಗಲಿದೆ. ರಾಜ್ಯದ 7,800 ಸ್ಥಳಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿಬ್ಲಾಕ್ ಮಟ್ಟದಲ್ಲಿ ಪಕ್ಷದ ಪ್ರಮುಖ ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸಲಿದ್ದಾರೆ.
`ದೇಶದಲ್ಲಿ ಮೊಟ್ಟ ಮೊದಲಬಾರಿಗೆ ಐತಿಹಾಸಿಕ ಮತ್ತು ವಿನೂತನ ಕಾರ್ಯಕ್ರಮದ ಮೂಲಕ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ನಡೆಯಲಿದೆ. ಕಾರ್ಯಕರ್ತರು ಪ್ರತಿಜ್ಞೆ ಕೈಗೊಳ್ಳಬೇಕೆಂಬ ಡಿ.ಕೆ.ಶಿವಕುಮಾರ್ ಅವರ ಹೊಸ ಚಿಂತನೆಯಲ್ಲಿ ಪಕ್ಷ ಸಮಾರಂಭದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. 10 ಸಾವಿರ ಸ್ಥಳಗಳಲ್ಲಿ ಏಕಕಾಲಕ್ಕೆ ಪದಗ್ರಹಣ ಸಮಾರಂಭದ ನೇರ ಪ್ರಸಾರವಾಗಲಿದ್ದು, 15 ರಿಂದ 20ಲಕ್ಷಕ್ಕೂ ಅಧಿಕ ಮಂದಿ ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ'
-ಸಲೀಂ ಅಹ್ಮದ್, ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ







