ಮುಂಬೈನ ಲಾಲ್‌ಭಾಗೀಚಾ ರಾಜಾಗೆ ಈ ವರ್ಷ ಗಣೇಶೋತ್ಸವವಿಲ್ಲ
ಕೊರೋನ ಹಾವಳಿಯ ಆತಂಕ

ಮುಂಬೈ,ಜು.1: ದೇಶದ ವಾಣಿಜ್ಯ ರಾಜಧಾನಿ ಮುಂಬಯಲ್ಲಿ ಕೊರೋನ ವೈರಸ್ ಮಹಾಮಾರಿಯ ಅಟ್ಟಹಾಸ ಮುಂದುವರಿದಿರುವ ಹಿನ್ನೆಲೆಯಲ್ಲಿ ಇಲ್ಲಿನ ಅತಿ ದೊಡ್ಡ ಗಣೇಶ ಪೂಜಾ ಪೆೆಂಡಾಲ್ ಲಾಲ್‌ಭಾಗೀಚಾ ರಾಜಾ, ತನ್ನ 84 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಗಣೇಶೋತ್ಸವದ ಆಚರಣೆಯನ್ನು ರದ್ದುಪಡಿಸಿದೆ.
‘‘ ಈ ವರ್ಷ ನಾವು ಗಣೇಶೋತ್ಸವಕ್ಕೆ ಯಾವುದೇ ವಿಗ್ರಹವನ್ನು ಇರಿಸುವುದಿಲ್ಲ.ಗಣೇಶೋತ್ಸವ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸುವುದರಿಂದ ವಿಗ್ರಹವನ್ನು ಈ ಸಲ ಪ್ರತಿಷ್ಠಾಪಿಸದಿರಲು ನಿರ್ಧರಿಸಲಾಗಿದೆ’’ಎಂದು ಲಾಲ್‌ಭಾಗ್ ಗಣೇಶ್ ಮಂಡಲ್‌ನ ಕಾರ್ಯರ್ದಿ ಸುಧೀರ್ ಸಾಳ್ವಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಅತಿ ದೊಡ್ಡ ಉತ್ಸವಗಳಲ್ಲಿ ಒಂದಾದ ಗಣೇಶ ಚತುರ್ಥಿಯು ಈ ವರ್ಷ ಆಗಸ್ಟ್ 22ರಂದು ಆಚರಿಸಲ್ಪಡಲಿದೆ. ಈ ಹತ್ತು ದಿನಗಳ ಉತ್ಸವದಲ್ಲಿ ಭಕ್ತಾದಿಗಳು ತಮ್ಮ ಮನೆಯಲ್ಲಿ ಇರಿಸಿರುವ ಗಣೇಶ ವಿಗ್ರಹಗಳನ್ನು ವಿಸರ್ಜನೆಯ ವೇಳೆ ಒಟ್ಟಾಗಿ ತರುತ್ತಾರೆ. ಹಲವೆಡೆ ತಾತ್ಕಾಲಿಕ ಪೆಂಡಾಲ್‌ಗಳನ್ನು ನಿರ್ಮಿಸಿ ಗಣೇಶ ಪೂಜೆಯನ್ನು ನೆರವೇರಿಸಲಾಗುತ್ತದೆ.
ಈ ಸಲ ಗಣೇಶ ಪೂಜೆಯ ಬದಲಿಗೆ ರಕ್ತದಾನ ಶಿಬಿರವನ್ನು ಆಚರಿಸಲಾಗುವುದು ಹಾಗೂ ಕೊರೋನ ವೈರಸ್ ಚಿಕಿತ್ಸೆಗಾದಿ ಪ್ಲಾಸ್ಮಾ ಥೆರಪಿಯನ್ನು ದಾನವಾಗಿ ನೀಡುವ ಬಗ್ಗೆ ಜಾಗೃತಿ ಶಿಬಿರವನ್ನು ಆಯೋಜಿಸಲಾಗುವುದು. ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಪ್ರಾಣತೆತ್ತ ಕೋವಿಡ್ ವೀರರ ಕುಟುಂಬಗಳನ್ನು ಸನ್ಮಾನಿಸಲಾಗುವುದು. ಕೊರೋನ ವೈರಸ್ ಚಿಕಿತ್ಸೆಗಾಗಿನ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದವರು ಹೇಳಿದರು.
ಮುಂಬೈನ ಇನ್ನೊಂದು ಪ್ರಮುಖ ಗಣೇಶೋತ್ಸವ ಮಂಡಳಿ, ಲಾಲ್‌ಭಾಗ್ ಸಾರ್ವಜನಿಕ್ ಉತ್ಸವ ಮಂಡಲ್ ಕೂಡಾ ಈ ವರ್ಷ ಗಣೇಶೋತ್ಸವ ಮೆರವಣಿಗೆ ನಡೆಸಲಿದರಲು ನಿರ್ಧರಿಸಿದೆ. ಈ ಸಲ ಕೇವಲ ನಾಲ್ಕು ಅಡಿ ಎತ್ತರದ ಗಣೇಶೋತ್ಸವ ವಿಗ್ರಹವನ್ನು ಇರಿಸಲಾಗುವುದೆಂದು ಅವರು ತಿಳಿಸಿದರು.







