ತಮಿಳುನಾಡಿನಲ್ಲಿ ತಂದೆ-ಮಗನ ಪೊಲೀಸ್ ಕಸ್ಟಡಿ ಸಾವು ಪ್ರಕರಣ: ಐವರು ಪೊಲೀಸರ ಬಂಧನ
ಚೆನ್ನೈ,ಜು.2: ಕಳೆದ ತಿಂಗಳು ತೂತ್ತುಕುಡಿ ಜಿಲ್ಲೆಯ ಸತಾಂಕುಳಂ ಪಟ್ಟಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ತಂದೆ ಮತ್ತು ಮಗ ಸಾವನ್ನಪ್ಪಿದ ಪ್ರಕರಣದಲ್ಲಿ ಓರ್ವ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಎಸ್‌ಐಗಳು ಸೇರಿದಂತೆ ಐವರು ಪೊಲೀಸರನ್ನು ಸಿಬಿ-ಸಿಐಡಿ ಅಧಿಕಾರಿಗಳು ಬಂಧಿಸಿದ್ದು,ಅವರ ವಿರುದ್ಧ ಕೊಲೆ ಆರೋಪವನ್ನು ಹೊರಿಸಲಾಗಿದೆ. ಸಿಬಿ-ಸಿಐಡಿ ಆರು ಪೊಲೀಸರ ವಿರುದ್ಧದ ಎಫ್‌ಐಆರ್‌ನ್ನು ಪರಿಷ್ಕರಿಸಿ ಕೊಲೆ ಆರೋಪಗಳನ್ನು ಸೇರಿಸಿದ ಬೆನ್ನಿಗೇ ಈ ಬಂಧನಗಳು ನಡೆದಿವೆ.
ಚೆನ್ನೈ ಉಚ್ಚ ನ್ಯಾಯಾಲಯದ ಅನುಮತಿಯ ಬಳಿಕ ಜೂ.28ರಂದು ತಮಿಳುನಾಡು ಸರಕಾರವು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಸಿಬಿಐ ಹಸ್ತಾಂತರಿಸಿಕೊಳ್ಳುವವರೆಗೆ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಅದು ಸಿಬಿ-ಸಿಐಡಿಗೆ ಸೂಚಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತೂತ್ತುಕುಡಿ ಜಿಲ್ಲಾ ಪೊಲೀಸರು ಸಿಪಿಸಿಯ ಕಲಂ 174ರಡಿ ಶಂಕಾಸ್ಪದ ಸಾವುಗಳ ಪ್ರಕರಣವನ್ನಷ್ಟೇ ದಾಖಲಿಸಿಕೊಂಡಿದ್ದರು. ಸಿಬಿ-ಸಿಐಡಿ ಅಧಿಕಾರಿಗಳು ಈ ಎಫ್‌ಐಆರ್‌ಗಳನ್ನು ಪರಿಷ್ಕತರಿಸಿ ಒಟ್ಟು ಆರು ಜನರ ವಿರುದ್ಧ ಕೊಲೆ ಆರೋಪವನ್ನು ಹೊರಿಸಿದ್ದಾರೆ.
ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿರುವ ಅಧಿಕಾರಿಯೋರ್ವರನ್ನು ವೇತನಸಹಿತ ರಜೆಯಲ್ಲಿ ಕಳುಹಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠವು ಗುರುವಾರ ಪೊಲೀಸರಿಗೆ ಆದೇಶಿಸಿದೆ. ಪ್ರತ್ಯಕ್ಷದರ್ಶಿ ಅಧಿಕಾರಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುವುದಾಗಿ ಐಜಿಪಿ ಎಸ್.ಮುರುಗನ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಜೂ. 19ರಂದು ರಾತ್ರಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಮೊಬೈಲ್ ಫೋನ್ ಅಂಗಡಿಯನ್ನು ತೆರೆದಿಟ್ಟಿದ್ದ ಆರೋಪದಲ್ಲಿ ಜಯರಾಜ್ ಮತ್ತು ಅವರ ಪುತ್ರ ಬೆನಿಕ್ಸ್‌ರನ್ನು ಬಂಧಿಸಿದ್ದ ಸತಾಂಕುಳಂ ಪೊಲೀಸರು ಅವರಿಗೆ ಚಿತ್ರಹಿಂಸೆಯನ್ನು ನೀಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ತಂದೆ-ಮಗ ಮೂರು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.