ತಬ್ಲೀಗಿ ಜಮಾಅತ್: ಅಧಿಕಾರಿಗಳನ್ನು ಸಂಪರ್ಕಿಸಲು ಕಪ್ಪುಪಟ್ಟಿಗೆ ಸೇರಿಸಲ್ಪಟ್ಟಿರುವ ವಿದೇಶಿ ಪ್ರಜೆಗಳಿಗೆ ಸುಪ್ರೀಂ ಸೂಚನ
ಹೊಸದಿಲ್ಲಿ,ಜು.2: ಕಳೆದ ಮಾರ್ಚ್‌ನಲ್ಲಿ ದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಸಮಾವೇಶದಲ್ಲಿ ಭಾಗಿಯಾಗಿದ್ದ ಹಾಗೂ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟಿರುವ ಎಲ್ಲ ವಿದೇಶಿ ಪ್ರಜೆಗಳು ಸಂಬಂಧಿಸಿದ ಅಧಿಕಾರಿಗಳಿಗೆ ವ್ಯಕ್ತಿಗತ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿದೆ.
ನಿಝಾಮುದ್ದೀನ್ ಪ್ರದೇಶದಲ್ಲಿ ನಡೆದಿದ್ದ ಸಮಾವೇಶದಲ್ಲಿ ಸಾವಿರಾರು ಭಾರತೀಯರು ಮತ್ತು ನೂರಾರು ವಿದೇಶಿಯರು ಪಾಲ್ಗೊಂಡಿದ್ದರು. ಬಳಿಕ ಈ ಪ್ರದೇಶವು ಕೊರೋನ ವೈರಸ್ ಹಾಟ್‌ಸ್ಪಾಟ್ ಆಗಿ ಬದಲಾಗಿತ್ತು. ಸಮಾವೇಶದ ಬಳಿಕ ಹಲವರು ದೇಶಾದ್ಯಂತದ ತಮ್ಮ ಊರುಗಳಿಗೆ ಮರಳಿದ್ದರೆ ಇತರರು ಬೇರೆ ಬೇರೆ ಸ್ಥಳಗಳಿಗೆ ತೆರಳಿ ಸಭೆಗಳಲ್ಲಿ ಭಾಗವಹಿಸಿದ್ದರು. ಇದು ದೊಡ್ಡ ಪ್ರಮಾಣದಲ್ಲಿ ಕೊರೋನ ವೈರಸ್‌ನ ಸೋಂಕು ಹರಡುವಿಕೆಯ ಬಗ್ಗೆ ಭಾರೀ ಕಳವಳವನ್ನು ಸೃಷ್ಟಿಸಿತ್ತು.
ಸಮಾವೇಶದಲ್ಲಿ ಭಾಗವಹಿಸಿದ್ದ 3,000ಕ್ಕೂ ಅಧಿಕ ವಿದೇಶಿ ಪ್ರತಿನಿಧಿಗಳು 10 ವರ್ಷಗಳ ಕಾಲ ಭಾರತಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಿ ಅವರನ್ನು ಕಪ್ಪುಪಟ್ಟಿಗೆ ಸೇರಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ 34 ವಿದೇಶಿ ಪ್ರತಿನಿಧಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ದೇಶವ್ಯಾಪಿ ಹೇರಲಾಗಿದ್ದ ಲಾಕ್‌ಡೌನ್ ನಡುವೆ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ತಾವು ರಾಷ್ಟ್ರೀಯ ಭದ್ರತೆಗೆ ಹಾನಿಯನ್ನುಂಟು ಮಾಡಿಲ್ಲ ಎಂದು ವಿಚಾರಣೆ ವೇಳೆ ತಿಳಿಸಿದ ವಿದೇಶಿ ಪ್ರಜೆಗಳು,ತಮ್ಮನ್ನು ಗಡಿಪಾರುಗೊಳಿಸುವಂತೆ ನ್ಯಾಯಾಲಯವನ್ನು ಕೋರಿಕೊಂಡರು.
ವೀಸಾ ಉಲ್ಲಂಘಿಸಿದವರನ್ನು ಗಡಿಪಾರು ಮಾಡುವುದು ಯಾವುದೇ ಸರಕಾರವು ಕೈಗೊಳ್ಳುವ ಸಹಜ ಕ್ರಮವಾಗಿದೆ ಎಂದು ಅರ್ಜಿದಾರರ ಪರ ವಕೀಲ ಉದಯ ಸಿಂಗ್ ವಾದಿಸಿದರು.
ತನ್ಮಧ್ಯೆ ಪ್ರತಿಯೊಂದೂ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಿ ವಿದೇಶಿ ಪ್ರಜೆಗಳ ವೀಸಾಗಳು ರದ್ದತಿ ಮತ್ತು ಕಪ್ಪು ಪಟ್ಟಿಗೆ ಸೇರ್ಪಡೆಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗಿದೆ ಎಂದು ಕೇಂದ್ರವು ಅಫಿಡಾವಿಟ್‌ನಲ್ಲಿ ಸ್ಪಷ್ಟಪಡಿಸಿದೆ. ಕೇಂದ್ರದ ಆದೇಶವು ಸಾರಾಸಗಟು ನಿರ್ಧಾರವಾಗಿದೆಯೇ ಅಥವಾ ಪ್ರತಿಯೊಂದೂ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗಿದೆಯೇ ಎಂದು ಜೂ.29ರಂದು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿತ್ತು.
ವಿದೇಶಿ ತಬ್ಲೀಗಿ ಜಮಾಅತ್ ಸದಸ್ಯರು ದೇಶದಲ್ಲಿ ಕ್ರಿಮಿನಲ್ ಕಾನೂನು ಕಲಾಪಗಳನ್ನು ಎದುರಿಸುತ್ತಿರುವುದರಿಂದ ಅವರಲ್ಲಿ ಯಾರನ್ನೂ ಈವರೆಗೂ ಗಡಿಪಾರುಗೊಳಿಸಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್ ವೀಸಾ ರದ್ದುಗೊಳಿಸಲಾಗಿದೆ ಎಂದು ಇ-ಮೇಲ್‌ಗಳನ್ನು ಕಳುಹಿಸಲಾಗಿತ್ತು ಎಂದು ಸರಕಾರವು ಹೇಳುತ್ತಿದೆ. ಆದರೆ ಶೋಕಾಸ್ ನೋಟಿಸ್‌ಗಳನ್ನು ಜಾರಿಗೊಳಿಸಿಲ್ಲ. ಅಲ್ಲದೆ ಈ ಆದೇಶಗಳು ವೀಸಾ ರದ್ದತಿಗೆ ಮಾತ್ರ ಸಂಬಂಧಿಸಿವೆಯೇ ಹೊರತು ಕಪ್ಪು ಪಟ್ಟಿಗೆ ಸೇರ್ಪಡೆ ಕುರಿತು ಅಲ್ಲ ಎಂದು ತಿಳಿಸಿದರು.
ಈ ವಿದೇಶಿ ಪ್ರಜೆಗಳ ವಿರುದ್ಧ ಕೇಂದ್ರವು ಹೊರಡಿಸಿರುವ ಆದೇಶಗಳನ್ನು ಅರ್ಜಿದಾರರಿಗೆ ಕಳುಹಿಸಿರಲಿಲ್ಲ ಎಂದು ನ್ಯಾಯವಾದಿ ಮೇನಕಾ ಗುರುಸ್ವಾಮಿ ಹೇಳಿದರು.